ದಾಂಡೇಲಿ ನಗರದಿಂದ ಹಸನ್ಮಾಳಕ್ಕೆ ಸಂಪರ್ಕ ಕಲ್ಪಿಸುವ ಟಿ.ಆರ್.ಟಿ ರಸ್ತೆಯ ರೈಲ್ವೆ ಹಳಿ ಸಮೀಪ ಬುಧವಾರ ನಸುಕಿನ ಜಾವ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಕಪ್ಪು ಚಿರತೆಯ ಓಡಾಟ ಕಂಡುಬರುತ್ತಿದೆ ಎನ್ನಲಾಗಿದ್ದು, ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಎರಡು ದಿನಗಳ ಹಿಂದಷ್ಟೇ ವೆಲ್ಡರ್ ನೆಸ್ಟ್ ಜಂಗಲ್ ಹೋಂ ಸ್ಟೇಗೆ ನುಗ್ಗಿದ್ದ ಚಿರತೆ, ಜರ್ಮನ್ ಶಫರ್ಡ್ ತಳಿಯ ನಾಯಿಯನ್ನು ಕೊಂದು ಹಾಕಿತ್ತು. ಇದರ ಬೆನ್ನಲ್ಲೇ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಈ ಭಾಗದಲ್ಲಿ ವನ್ಯಜೀವಿಯ ಸಂಚಾರದ ಬಗ್ಗೆ ಆತಂಕ ಮೂಡಿಸಿದೆ.
ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ತಮ್ಮ ಸಾಕುಪ್ರಾಣಿಗಳು ಹಾಗೂ ಜಾನುವಾರುಗಳನ್ನು ಹೊರಗೆ ಬಿಡಲು ಹಿಂದೇಟು ಹಾಕುವಂತಾಗಿದೆ. ವಿಶೇಷವಾಗಿ ರಾತ್ರಿ ಮತ್ತು ನಸುಕಿನ ವೇಳೆ ಸಂಚರಿಸುವವರು ಎಚ್ಚರಿಕೆ ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ್ ಕೆ.ಸಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಗುರುಪ್ರಸಾದ್ ನೇತೃತ್ವದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದ್ದು, ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ತೆರಳದಂತೆ ಜಾಗೃತಿ ಮೂಡಿಸಿದೆ.

ಚಿರತೆಯ ಚಲನವಲನದ ಮೇಲೆ ನಿಗಾ ಇರಿಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಮಕ್ಕಳು, ಸಾಕುಪ್ರಾಣಿಗಳು ಹಾಗೂ ಜಾನುವಾರುಗಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಮನವಿ ಮಾಡಲಾಗಿದೆ.
ಒಂದೆಡೆ ಕಪ್ಪು ಚಿರತೆಯ ನಿರಂತರ ಓಡಾಟ, ಮತ್ತೊಂದೆಡೆ ಸಾಕು ನಾಯಿಯ ಮೇಲೆ ದಾಳಿಯ ಬೆಳವಣಿಗೆಗಳು ಹಸನ್ಮಾಳ ಸುತ್ತಮುತ್ತಲಿನ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
