ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

ಪಿಎಸ್ಐ ಹುದ್ದೆಗೆ ಕಿತ್ತಾಟ: ಮೂವರು ಅಧಿಕಾರಿಗಳದ್ದು ಎನ್ನಲಾದ ಆಡಿಯೋ ವೈರಲ್

Pakka News Web • 30 ಆಗಸ್ಟ್ 2026,

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಹುದ್ದೆಯನ್ನು ಕೇಂದ್ರವಾಗಿಟ್ಟುಕೊಂಡು ಮೂವರು ಪೊಲೀಸ್ ಅಧಿಕಾರಿಗಳ ನಡುವೆ ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಆಡಿಯೋವನ್ನು ಜೆಡಿಎಸ್ ಪಕ್ಷವು ತನ್ನ ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡು ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದು, ಇಲಾಖೆಯೊಳಗೆ ಭಾರಿ ಮುಜುಗರ ಸೃಷ್ಟಿಯಾಗಿದೆ.


ಹಳಿಯಾಳ ಠಾಣೆಯಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಪಿಎಸ್ಐ ಬಸವರಾಜ ಮಬನೂರು ಅವರು ಪೊಲೀಸರ ಮೇಲೆ ರೌಡಿಯೊಬ್ಬ ಹಲ್ಲೆ ನಡೆಸಿದಾಗ ತುರ್ತು ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಕಾರಣಕ್ಕೆ ಅಮಾನತುಗೊಂಡಿದ್ದರು. ಅವರ ಸ್ಥಾನಕ್ಕೆ ಬರಲು ಅಧಿಕಾರಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು ಎನ್ನಲಾಗಿದೆ.

ಇದೀಗ ವೈರಲ್ ಆಗಿರುವ ಸಂಭಾಷಣೆಯಲ್ಲಿ ಪಿಎಸ್ಐ ಕೃಷ್ಣ ಅರಗೇರಿ ಅವರು ರೌಡಿಶೀಟರ್ ಒಬ್ಬನ ಅರ್ಧ ಹೆಸರನ್ನು ಉಲ್ಲೇಖಿಸಿ, ಆತ ತಮಗೆ ಒಂದೂವರೆ ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡು ಮೋಸ ಮಾಡಿದ್ದಾನೆ ಎಂದು ನೋವು ತೋಡಿಕೊಂಡಿದ್ದಾರೆ ಎನ್ನಲಾದ ಮಾತುಗಳಿವೆ.

ಜೊತೆಗೆ, ಈ ಹಿಂದೆ ಕರ್ತವ್ಯದಲ್ಲಿದ್ದ ಪಿಎಸ್ಐ ವಿನೋದ ರೆಡ್ಡಿ ಹಾಗೂ ಮತ್ತೊಬ್ಬ ಪಿಎಸ್ಐ ಕಿರಣ ಪಾಟೀಲ್ ನಡುವಿನ ಮಾತುಕತೆಗಳೂ ಇದರಲ್ಲಿವೆ. ಹಳಿಯಾಳ ಠಾಣೆಗೆ ಬರುವ ಮಾಸಿಕ ಕಮಾಯಿ, ಯಾವ ಅಧಿಕಾರಿ ಬಂದರೆ ಎಲ್ಲರಿಗೂ ಭದ್ರತೆ ಸಿಗುತ್ತದೆ ಎಂಬ ಲೆಕ್ಕಾಚಾರ, ‘ಡಿವೈಎಸ್ಪಿಗೆ ಮಸ್ಕಾ ಹೊಡೆದು ದುಡ್ಡು ಕೊಟ್ಟು ಬರುತ್ತೇನೆ’ ಎಂದು ಕಿರಣ ಪಾಟೀಲ ಹೇಳಿದ್ದು ಹಾಗೂ ‘ಅವರಿಗೆ ಅಂತಹ ಆಸೆ ಇಲ್ಲ’ ಎಂದು ಕೃಷ್ಣ ಅರಗೇರಿ ಹೇಳಿದ ಅಂಶಗಳು ದಾಖಲಾಗಿವೆ.

ವಿನೋದ ರೆಡ್ಡಿ ಅವರಿಗೆ ಹುದ್ದೆ ಸಿಗದ ಕಾರಣ ನಿರಾಸೆಯಿಂದ ಮಾತನಾಡಿದಂತೆ ಕೇಳಿಬರುವ ಸಂಭಾಷಣೆ ಹಾಗೂ ಕಾನ್ಸ್ಟೆಬಲ್ಗಳಂತೆ ಪರಿಚಯಸ್ಥ ವೈದ್ಯರಿಂದ ಮೆಡಿಕಲ್ ಸರ್ಟಿಫಿಕೇಟ್ ಪಡೆದು ರಜೆ ಮಾಡುವ ಉಪಾಯಗಳ ಬಗ್ಗೆಯೂ ಚರ್ಚಿಸಲಾಗಿದೆ.

ಕೆಲವೆಡೆ ಆಕ್ಷೇಪಾರ್ಹ ಪದಬಳಕೆ ಹೊಂದಿರುವ ಈ ಆಡಿಯೋ ಅಲ್ಲಲ್ಲಿ ಎಡಿಟ್ ಮಾಡಿದಂತೆ ಕಂಡುಬರುತ್ತಿದ್ದು, ಇದು ನೈಜ ಧ್ವನಿಯೇ ಅಥವಾ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಿದ್ದೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ಧ್ವನಿಮುದ್ರಿಕೆಯನ್ನು ಎಡಿಟ್ ಮಾಡಿ ಹರಿಬಿಟ್ಟವರು ಯಾರು ಮತ್ತು ಈ ಸಂಭಾಷಣೆಯ ಅಸಲಿಯತ್ತೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250