ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಜಂಬಳ್ಳಿ ಅರಣ್ಯದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಕಾರು, ಅದರೊಳಗಿದ್ದ ಮೊಬೈಲ್ ಹಾಗೂ ಸೊಸೈಟಿಗೆ ಸಂಬಂಧಿಸಿದ ದಾಖಲೆಗಳು…
ಆದರೆ ಕಾರಿನ ಮಾಲೀಕ ಮಾತ್ರ ನಾಪತ್ತೆ. ಹೀಗಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ಕುಡುಮಲ್ಲಿಗೆ ಸಹಕಾರ ಸೊಸೈಟಿ ಸಿಇಒ ಮದನ್ ಅವರ ನಾಪತ್ತೆ ಪ್ರಕರಣ ಇದೀಗ ಭಟ್ಕಳದಲ್ಲಿ ಸಿಕ್ಕ ಹೊಸ ಸುಳಿವಿನಿಂದ ಮತ್ತಷ್ಟು ಕುತೂಹಲ ಮೂಡಿಸಿದೆ.
ಕಳೆದ ಎರಡು ದಿನಗಳ ಹಿಂದೆ ತೀರ್ಥಹಳ್ಳಿಯ ಮನೆಯಿಂದ ಹೊರಟಿದ್ದ ಮದನ್ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಕೆಲವೇ ಗಂಟೆಗಳ ಬಳಿಕ ಅವರ ಮಾರುತಿ ಸ್ವಿಫ್ಟ್ ಕಾರು ಜಂಬಳ್ಳಿ ಅರಣ್ಯದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಕಾರಿನೊಳಗೆ ಮೊಬೈಲ್ ಫೋನ್, ಬೀಗ ಹಾಗೂ ಸೊಸೈಟಿಗೆ ಸಂಬಂಧಿಸಿದ ಮಹತ್ವದ ಲೆಕ್ಕಪತ್ರಗಳು ಪತ್ತೆಯಾಗಿದ್ದು, ಪ್ರಕರಣದ ಹಿಂದೆ ಏನಾದರೂ ಅಸಹಜ ಬೆಳವಣಿಗೆ ನಡೆದಿರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಅದರಲ್ಲೂ ಸೊಸೈಟಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳು ಹಾಗೂ ಹಿಂದಿನ ಪೊಲೀಸ್ ಪ್ರಕರಣಗಳ ಹಿನ್ನೆಲೆ ತನಿಖೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು.
ಮದನ್‌ಗಾಗಿ ಅರಣ್ಯ ಪ್ರದೇಶದಲ್ಲಿ ಶೋಧ ನಡೆಯುತ್ತಿದ್ದ ಸಂದರ್ಭದಲ್ಲೇ, ನೂರಾರು ಕಿಲೋಮೀಟರ್ ದೂರದ ಭಟ್ಕಳದಲ್ಲಿ ಅವರು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕಾಡಿನಲ್ಲಿ ಕಾರು, ಮೊಬೈಲ್ ಮತ್ತು ದಾಖಲೆಗಳನ್ನು ಬಿಟ್ಟು ಅವರು ಭಟ್ಕಳ ತಲುಪಿದ್ದು ಹೇಗೆ ಎಂಬುದು ಇದೀಗ ಪ್ರಕರಣದ ಪ್ರಮುಖ ಪ್ರಶ್ನೆಯಾಗಿದೆ.
ಕಾರನ್ನು ಕಾಡಿನಲ್ಲಿ ಬಿಟ್ಟು ಮದನ್ ಒಬ್ಬರೇ ಭಟ್ಕಳಕ್ಕೆ ತೆರಳಿದ್ದರೇ? ಮಾರ್ಗಮಧ್ಯೆ ಯಾರಾದರೂ ಅವರಿಗೆ ನೆರವು ನೀಡಿದ್ದರೇ? ಅಥವಾ ನಾಪತ್ತೆಯಾದ ಅವಧಿಯಲ್ಲಿ ನಡೆದಿರುವ ಯಾವುದಾದರೂ ಬೆಳವಣಿಗೆ ಪ್ರಕರಣಕ್ಕೆ ಹೊಸ ಆಯಾಮ ನೀಡಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಭಟ್ಕಳಕ್ಕೂ ಮದನ್ ಅವರಿಗೂ ಇರುವ ಸಂಪರ್ಕವೇನು ಎಂಬುದು ಕೂಡ ತನಿಖೆಯ ಮತ್ತೊಂದು ಪ್ರಮುಖ ಅಂಶವಾಗಿದೆ.
ಸದ್ಯ ಮದನ್ ಸುರಕ್ಷಿತವಾಗಿ ಪತ್ತೆಯಾಗಿರುವುದು ಕುಟುಂಬಕ್ಕೆ ನೆಮ್ಮದಿ ತಂದಿದ್ದರೂ, ಕಾಡಿನಲ್ಲಿ ಕಾರು ಬಿಟ್ಟು ಕರಾವಳಿಯಲ್ಲಿ ಸಿಇಒ ಪ್ರತ್ಯಕ್ಷವಾದ ಹಿಂದಿನ ಅಸಲಿ ಕಾರಣವೇನು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮದನ್ ಅವರ ಹೇಳಿಕೆ ಮತ್ತು ಪೊಲೀಸರ ತನಿಖೆಯಿಂದಲೇ ಈ ರಹಸ್ಯದ ಮುಂದಿನ ಕೊಂಡಿಗಳು ಹೊರಬರಬೇಕಿದೆ.
