ಭಟ್ಕಳ:ಕಲ್ಲು ತೂರಾಟದ ಆರೋಪದ ಘಟನೆಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಶುಕ್ರವಾರ ನಡೆಯಲಿರುವ ಗಣೇಶ ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ
ಪಟ್ಟಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ.

ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ ಪ್ರದೇಶಗಳು, ಪ್ರಮುಖ ವೃತ್ತಗಳು ಹಾಗೂ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡಿ.ಎ.ಆರ್ ಮತ್ತು ಕೆ.ಎಸ್.ಆರ್.ಪಿ. ಸ್ಟ್ರೈಕಿಂಗ್ ಫೋರ್ಸ್ನ ಐದು ತುಕಡಿಗಳು, ಎಸ್.ಎ.ಎಫ್ನ 21 ಸಿಬ್ಬಂದಿ ಹಾಗೂ ಆರ್.ಎಫ್ನ 136 ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇತ್ತೀಚಿನ ಘಟನೆಯ ನಂತರ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಜನರ ಚಲನವಲನ ಹಾಗೂ ಪರಿಸ್ಥಿತಿಯನ್ನು ಪೊಲೀಸರು ನಿರಂತರವಾಗಿ ಗಮನಿಸಲಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಭಟ್ಕಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯುತ್ತಿದ್ದು, ವಿಸರ್ಜನಾ ಕಾರ್ಯಕ್ರಮ ಯಾವುದೇ ಅಹಿತಕರ ಬೆಳವಣಿಗೆಗೆ ಆಸ್ಪದ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ನಡುವೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದೃಢೀಕರಿಸದ ಮಾಹಿತಿಗೆ ಮಹತ್ವ ನೀಡದೆ, ಶಾಂತಿ ಕಾಪಾಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಗಣೇಶ ವಿಸರ್ಜನಾ ಮೆರವಣಿಗೆ ಸುಗಮವಾಗಿ ಸಾಗಲು ಸಾರ್ವಜನಿಕರು ಹಾಗೂ ಸಂಘಟಕರು ಪೊಲೀಸ್ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ. ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
