ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

20 ವರ್ಷಗಳ ಸಮುದ್ರ ಕಾವಲಿಗೆ ತೆರೆ: ಸಾವಿತ್ರಿಬಾಯಿ ಫುಲೆ ನೌಕೆಗೆ ಗೌರವದ ವಿದಾಯ

Pakka News Web • 19 ಸೆಪ್ಟೆಂ 2026,

ಕಾರವಾರ: ಭಾರತೀಯ ತಟರಕ್ಷಣಾ ಪಡೆಯ ಸಮುದ್ರ ಕಾವಲಿನಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ‘ಸಾವಿತ್ರಿಬಾಯಿ ಫುಲೆ’ ನೌಕೆಗೆ ಕಾರವಾರದಲ್ಲಿ ಶನಿವಾರ ಸಂಜೆ ಗೌರವಪೂರ್ವಕ ವಿದಾಯ ನೀಡಲಾಯಿತು. ಕಾರವಾರ ಬಂದರಿನ ಕೋಸ್ಟ್ ಗಾರ್ಡ್ ಜೆಟ್ಟಿಯಲ್ಲಿ ನಡೆದ ಸಮಾರಂಭದಲ್ಲಿ ನೌಕೆಯನ್ನು ಅಧಿಕೃತವಾಗಿ ಡಿ-ಕಮಿಷನ್ ಮಾಡುವ ಮೂಲಕ ಅದರ ಸಕ್ರಿಯ ಸೇವೆಗೆ ತೆರೆ ಎಳೆಯಲಾಯಿತು.

ಸೂರ್ಯಾಸ್ತದ ಬಳಿಕ ನಡೆದ ಸಮಾರಂಭದಲ್ಲಿ ನೌಕೆಯ ಮೇಲಿದ್ದ ಭಾರತೀಯ ತಟರಕ್ಷಣಾ ಪಡೆಯ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಕೆಳಗಿಳಿಸಲಾಯಿತು. ಬಳಿಕ ನೌಕೆಯ ಉದ್ದಕ್ಕೆ ಸಮನಾದ ‘ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಇಳಿಸುವ ಮೂಲಕ ಅದರ ಸೇವಾ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಈ ವೇಳೆ ತಟರಕ್ಷಣಾ ಪಡೆಯ ಸಿಬ್ಬಂದಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ‘ಸಾವಿತ್ರಿಬಾಯಿ ಫುಲೆ’ ನೌಕೆಯ ಸೇವೆಯನ್ನು ಸ್ಮರಿಸಿದರು. ನೌಕೆಯ ಕಾರ್ಯಕ್ಷಮತೆಯ ಹಿಂದೆ ಕಮಾಂಡರ್‌ಗಳು, ಅಧಿಕಾರಿಗಳು, ನಾವಿಕರು ಹಾಗೂ ತಾಂತ್ರಿಕ ಸಿಬ್ಬಂದಿಯ ನಿರಂತರ ಪರಿಶ್ರಮವಿದೆ. ಸುಮಾರು ಎರಡು ದಶಕಗಳ ಕಾಲ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಮುದ್ರ ಗಡಿ ಕಾವಲು, ಗಸ್ತು ಹಾಗೂ ಸುರಕ್ಷತಾ ಕಾರ್ಯಾಚರಣೆಗಳಲ್ಲಿ ನೌಕೆ ಪ್ರಮುಖವಾಗಿ ತೊಡಗಿಸಿಕೊಂಡಿತ್ತು ಎಂದು ಹೇಳಿದರು.

ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು ಹಾಗೂ ನಾವಿಕರ ರಕ್ಷಣೆಯಲ್ಲಿಯೂ ನೌಕೆ ಹಲವು ಬಾರಿ ಕಾರ್ಯಾಚರಣೆ ನಡೆಸಿದ್ದು, ತಟರಕ್ಷಣಾ ಪಡೆಯ ಕಾರ್ಯಾಚರಣಾ ಸಾಮರ್ಥ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ನೌಕೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು, ನಾವಿಕರು, ಎಂಜಿನಿಯರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಶಸ್ತ್ರಾಸ್ತ್ರ ತಜ್ಞರು ಹಾಗೂ ಲಾಜಿಸ್ಟಿಕ್ಸ್ ಸಿಬ್ಬಂದಿಯ ಸೇವೆಯನ್ನು ಅವರು ಸ್ಮರಿಸಿದರು.

ನೌಕೆಯ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಗೌರವ್ ಶ್ರೀವಾಸ್ತವ್ ಮಾತನಾಡಿ, 2006ರ ಅಕ್ಟೋಬರ್ 28ರಂದು ಸೇವೆಗೆ ಸೇರ್ಪಡೆಯಾದ ‘ಸಾವಿತ್ರಿಬಾಯಿ ಫುಲೆ’ ಕಳೆದ 20 ವರ್ಷಗಳಲ್ಲಿ ಸುಮಾರು 78,468 ನಾಟಿಕಲ್ ಮೈಲುಗಳಷ್ಟು ಗಸ್ತು ನಡೆಸಿದೆ ಎಂದು ತಿಳಿಸಿದರು. ಈ ಅವಧಿಯಲ್ಲಿ 14 ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ ನಾಲ್ಕು ವೈದ್ಯಕೀಯ ತೆರವು ಕಾರ್ಯಾಚರಣೆಗಳನ್ನು ನಡೆಸಿ 71 ಮಂದಿಯ ಜೀವ ರಕ್ಷಣೆಗೆ ನೆರವಾಗಿದೆ. ಅಲ್ಲದೆ ಎರಡು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದರು.

ನೌಕೆಯ ಸೇವಾ ಅವಧಿಯಲ್ಲಿ 2006–07, 2010–11 ಹಾಗೂ 2014ರಲ್ಲಿ ಅತ್ಯುತ್ತಮ ‘ಸರ್ಚ್ ಅಂಡ್ ರೆಸ್ಕ್ಯೂ ಯೂನಿಟ್’ ಪ್ರಶಸ್ತಿಗಳು ಲಭಿಸಿವೆ. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸ್ವದೇಶಿಯಾಗಿ ನಿರ್ಮಾಣಗೊಂಡಿದ್ದ ಈ ನೌಕೆ, ದೇಶೀಯ ನೌಕಾ ನಿರ್ಮಾಣ ಸಾಮರ್ಥ್ಯಕ್ಕೂ ಒಂದು ಉದಾಹರಣೆಯಾಗಿತ್ತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕಾರವಾರದ ಕಮಾಂಡರ್ ಅಖಿಲ್ ಯಾದವ್, ಡಿಎಫ್‌ಒ ಆಂತೋಣಿ ಮರಿಯಪ್ಪ, ಸಿಐಎಸ್‌ಎಫ್ ಕೈಗಾ ಕಮಾಂಡಿಂಗ್ ಆಫೀಸರ್ ಅಜಯ್ ಕುಮಾರ್ ಝಾ, ನಿವೃತ್ತ ಡಿಐಜಿ ಮನೋಜ್ ಬಾಡ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250