ಮಳೆಯ ನಡುವೆಯೂ ಭಕ್ತಿಯ ಹೊಳೆ
ಕಾರವಾರ: ವರುಣನ ಅಬ್ಬರಕ್ಕೂ ಭಕ್ತರ ಉತ್ಸಾಹ ಕುಗ್ಗಲಿಲ್ಲ. ಕಳೆದ 11 ದಿನಗಳಿಂದ ವಿಶೇಷ ಪೂಜೆ, ಆರಾಧನೆಯೊಂದಿಗೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳಿಗೆ ಗುರುವಾರ ಕಾರವಾರದ ಸಮುದ್ರದಲ್ಲಿ ಭಕ್ತಿ-ಭಾವದ ವಿದಾಯ ನೀಡಲಾಯಿತು. ಧಾರಾಕಾರ ಮಳೆಯ ನಡುವೆಯೂ ವಿವಿಧ ಗಣೇಶೋತ್ಸವ ಸಮಿತಿಗಳ ಮೆರವಣಿಗೆಗಳು ಸಾಗಿದ್ದು, ನಗರದಾದ್ಯಂತ ಗಣೇಶ ವಿಸರ್ಜನಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ನಗರದ ಮಾರುತಿ ಗಲ್ಲಿ, ಶಿರವಾಡ, ಕೋಡಿಭಾಗ, ನಂದನಗದ್ದಾ, ರಿಕ್ಷಾ ಚಾಲಕ-ಮಾಲಕರ ಸಂಘ, ಹರಿದೇವನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.
11 ದಿನಗಳ ಪೂಜಾ ಕಾರ್ಯಕ್ರಮಗಳ ಬಳಿಕ ಗುರುವಾರ ಸಂಜೆ ಮೆರವಣಿಗೆ ಮೂಲಕ ಮೂರ್ತಿಗಳನ್ನು ಸಮುದ್ರ ತೀರಕ್ಕೆ ಕೊಂಡೊಯ್ದು ವಿಸರ್ಜನೆ ನೆರವೇರಿಸಲಾಯಿತು. ವಿಸರ್ಜನಾ ಮೆರವಣಿಗೆ ಆರಂಭವಾದ ಬಳಿಕ ಮಳೆ ಕೂಡ ಬಿರುಸು ಪಡೆದುಕೊಂಡಿತು.

ಸಂಜೆ ಸುಮಾರು 6 ಗಂಟೆ ವೇಳೆಗೆ ಜೋರಾಗಿ ಸುರಿದ ಮಳೆಯ ನಡುವೆಯೂ ಭಕ್ತರು ಛತ್ರಿ, ಮಳೆಯನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗಣೇಶನಿಗೆ ಅಂತಿಮ ನಮನ ಸಲ್ಲಿಸಿದರು. ಮಳೆ ಸುರಿಯುತ್ತಿದ್ದರೂ ರಸ್ತೆಗಳುದ್ದಕ್ಕೂ ಭಕ್ತರ ಸಂಭ್ರಮ, ಜಯಘೋಷ ಮತ್ತು ಭಕ್ತಿಗೀತೆಗಳ ಸದ್ದು ಕೇಳಿಬಂದಿತು.
ಈ ಬಾರಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸೂಚನೆಯಂತೆ ಡಿಜೆ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಬಹುತೇಕ ಗಣೇಶೋತ್ಸವ ಸಮಿತಿಗಳು ನಿಯಮ ಪಾಲಿಸಿ ಸಾಂಪ್ರದಾಯಿಕ ವಾದ್ಯಗಳು ಹಾಗೂ ಭಕ್ತಿಗೀತೆಗಳೊಂದಿಗೆ ಮೆರವಣಿಗೆ ನಡೆಸಿದವು. ಆದರೆ ಕೆಲವು ಕಡೆಗಳಲ್ಲಿ ಡಿಜೆ ಸದ್ದು ಕೇಳಿಬಂದಿರುವುದು ಕಂಡುಬಂದಿತು.
ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ಹಾಗೂ ಮೆರವಣಿಗೆಗೆ ಯಾವುದೇ ಅಡಚಣೆ ಉಂಟಾಗದಂತೆ ಸಂಚಾರ ವ್ಯವಸ್ಥೆ ಮತ್ತು ಭದ್ರತೆಯ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಮಳೆಯ ನಡುವೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
