ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಕಾಳಿ ನದಿಯಲ್ಲಿ ಬೃಹತ್ ಮೊಸಳೆ; ಪ್ರವಾಸಿಗರಲ್ಲಿ ಆತಂಕ!

Pakka News Web • 14 ಆಕ್ಟೋ 2026,

ಜೋಯಿಡಾ: ಕಾಳಿ ನದಿಯಲ್ಲಿ ಬೃಹತ್ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಮೊಸಳೆಯಿದ್ದ ದಿಕ್ಕಿನಲ್ಲೇ ಐವರು ಪ್ರವಾಸಿಗರಿದ್ದ ದೋಣಿ ಸಾಗಿದ ಘಟನೆ ಗಣೇಶಗುಡಿ–ಇಳವಾ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಸೇತುವೆಯ ಮೇಲಿದ್ದ ಸ್ಥಳೀಯರು ದೋಣಿ ಚಾಲಕನಿಗೆ ಎಚ್ಚರಿಕೆ ನೀಡಿದರೂ ದೋಣಿ ಮುಂದುವರಿದಿದ್ದು, ಮೊಸಳೆಯ ಚಲನವಲನವನ್ನು ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ಬಳಿಕ ಚಾಲಕ ದೋಣಿಯನ್ನು ಹಿಂದಕ್ಕೆ ತಿರುಗಿಸಿದ್ದಾನೆ ಎನ್ನಲಾಗಿದೆ.

ಕಾಳಿ ನದಿಯಲ್ಲಿ ಮೊಸಳೆಗಳ ಸಂಚಾರವಿರುವುದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಆದರೂ ಈ ಭಾಗಕ್ಕೆ ಆಗಮಿಸುವ ಕೆಲ ಪ್ರವಾಸಿಗರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನದಿಗೆ ಇಳಿದು ಈಜುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಇಂತಹ ಅಪಾಯಕಾರಿ ವರ್ತನೆಗಳಿಂದ ಪ್ರವಾಸಿಗರ ಜೀವಕ್ಕೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ದಾಂಡೇಲಿಯಲ್ಲಿ ಕೈಗೊಂಡಿರುವ ಮಾದರಿಯಲ್ಲೇ ಗಣೇಶಗುಡಿ–ಇಳವಾ ಭಾಗದಲ್ಲಿಯೂ ಅಗತ್ಯ ಸ್ಥಳಗಳಲ್ಲಿ ಕಬ್ಬಿಣದ ಬೇಲಿ ಅಳವಡಿಸಿ, ಪ್ರವಾಸಿಗರು ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೊಸಳೆಗಳಿರುವ ಪ್ರದೇಶಗಳ ಕುರಿತು ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜತೆಗೆ, ನದಿಗೆ ಇಳಿದು ಈಜುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಇದಲ್ಲದೆ, ಪ್ರವಾಸಿ ದೋಣಿಗಳ ಸಂಚಾರದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟ ದೋಣಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250