ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಸ್ವದೇಶಿ ಶಕ್ತಿಯ ಅನಾವರಣ; ನೌಕಾಪಡೆಗೆ ಸಮರ್ಥಕ್ ಬಲ!

Pakka News Web • 15 ಆಕ್ಟೋ 2026,

ಕಾರವಾರ: ಸಮುದ್ರದ ಕಣ್ಗಾವಲು, ರಕ್ಷಣಾ ಕಾರ್ಯಾಚರಣೆ, ಮಾನವರಹಿತ ತಂತ್ರಜ್ಞಾನಗಳ ಪ್ರಯೋಗದಿಂದ ಹಿಡಿದು ವಿಪತ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯವರೆಗೆ, ಬಹುಮುಖ ಜವಾಬ್ದಾರಿಗಳನ್ನು ಹೊರುವ ಭಾರತದ ಸ್ವದೇಶಿ ಯುದ್ಧನೌಕೆ ‘ಐಎನ್‌ಎಸ್ ಸಮರ್ಥಕ್’ (ಅ.16) ಕಾರವಾರದ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಬಲ ಹೆಚ್ಚಿಸಲಿದೆ.

ಸುಮಾರು 5,000 ಟನ್ ತೂಕದ ಈ ಬಹುಪಯೋಗಿ ನೌಕೆ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಯಾಗಲಿದ್ದು, ಉಪರಾಷ್ಟ್ರಪತಿ ಚಂದ್ರಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ವದೇಶಿ ರಕ್ಷಣಾ ತಂತ್ರಜ್ಞಾನ ಮತ್ತು ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯಕ್ಕೆ ಹೊಸ ಆಯಾಮ ನೀಡಲಿರುವ ಈ ಸೇರ್ಪಡೆ ಸಮಾರಂಭದತ್ತ ದೇಶದ ರಕ್ಷಣಾ ವಲಯದ ಗಮನ ಹರಿದಿದೆ.

ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯಡಿ ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ ಆ್ಯಂಡ್‌ ಟಿ) ಸಂಸ್ಥೆ ಈ ನೌಕೆಯನ್ನು ನಿರ್ಮಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿರುವ ನಾಲ್ಕು ಬಹುಪಯೋಗಿ ನೌಕೆಗಳ ಸರಣಿಯಲ್ಲಿ ಸಮರ್ಥಕ್ ಮೊದಲನೆಯದು. ಕಳೆದ ಆಗಸ್ಟ್ 27ರಂದು ನಿರ್ಮಾಣ ಸಂಸ್ಥೆಯಿಂದ ನೌಕಾಪಡೆಗೆ ಹಸ್ತಾಂತರಗೊಂಡಿದ್ದ ನೌಕೆ, ಇದೀಗ ಅಧಿಕೃತವಾಗಿ ಸೇವೆ ಆರಂಭಿಸಲು ಸಜ್ಜಾಗಿದೆ. ಇದರ ನಿರ್ಮಾಣದಲ್ಲಿ ಶೇ.75ಕ್ಕಿಂತ ಹೆಚ್ಚು ಸ್ವದೇಶಿ ಅಂಶಗಳನ್ನು ಬಳಸಿರುವುದು ಭಾರತದ ರಕ್ಷಣಾ ಉತ್ಪಾದನಾ ಸ್ವಾವಲಂಬನೆಯ ಮಹತ್ವವನ್ನು ಎತ್ತಿಹಿಡಿದಿದೆ.

ಕಾರವಾರದ ನೌಕಾನೆಲೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಸೇರಿದಂತೆ ಹಿರಿಯ ನೌಕಾಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು, ಗಣ್ಯರು ಹಾಗೂ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಒಂದೇ ನೌಕೆಯಲ್ಲಿ ಹಲವು ಕಾರ್ಯಾಚರಣೆಗಳ ಶಕ್ತಿ

ಸಮುದ್ರದಲ್ಲಿ ಗಸ್ತು ಮತ್ತು ಕಣ್ಗಾವಲು ನಡೆಸುವುದರ ಜೊತೆಗೆ ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳಲ್ಲಿಯೂ ಸಮರ್ಥಕ್ ಮಹತ್ವದ ಪಾತ್ರ ವಹಿಸಲಿದೆ. ಸಮುದ್ರದಲ್ಲಿ ವಿವಿಧ ಗುರಿಗಳನ್ನು ನಿಯೋಜಿಸುವುದು, ಹೊಸ ರಕ್ಷಣಾ ವ್ಯವಸ್ಥೆಗಳ ಪರೀಕ್ಷೆ ಹಾಗೂ ಮೌಲ್ಯಮಾಪನಕ್ಕೆ ವೇದಿಕೆ ಒದಗಿಸುವುದು ಇದರ ಪ್ರಮುಖ ಸಾಮರ್ಥ್ಯಗಳಾಗಿವೆ. ಮಾನವರಹಿತ ಮತ್ತು ಸ್ವಾಯತ್ತ ವ್ಯವಸ್ಥೆಗಳಿಗೆ ತಾಯಿನೌಕೆಯಾಗಿ ಕಾರ್ಯನಿರ್ವಹಿಸುವ ಅವಕಾಶವೂ ಇರುವುದರಿಂದ, ಮುಂದಿನ ತಲೆಮಾರಿನ ನೌಕಾ ತಂತ್ರಜ್ಞಾನಗಳ ಪ್ರಯೋಗ ಹಾಗೂ ಬಳಕೆಗೆ ಇದು ನೆರವಾಗಲಿದೆ.

ಸಮರ್ಥಕ್‌ನ ಕಾರ್ಯವ್ಯಾಪ್ತಿ ಯುದ್ಧ ಮತ್ತು ಕಣ್ಗಾವಲು ಕಾರ್ಯಾಚರಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಚಂಡಮಾರುತ, ಪ್ರವಾಹದಂತಹ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಸಾಮಗ್ರಿಗಳನ್ನು ಸಾಗಿಸುವುದು, ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವುದು, ಮುಳುಗಿದ ವಸ್ತುಗಳನ್ನು ಪತ್ತೆಹಚ್ಚಿ ಮೇಲಕ್ಕೆತ್ತುವುದು ಸೇರಿದಂತೆ ಹಲವು ಕಾರ್ಯಗಳಿಗೆ ಇದನ್ನು ಬಳಸಬಹುದು. ಅಗತ್ಯವಿದ್ದಾಗ ಸೀಮಿತ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ ನೌಕೆಯಾಗಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

7,200 ನಾಟಿಕಲ್ ಮೈಲುಗಳಿಗೂ ಅಧಿಕ ದೂರದ ಪಯಣ

100 ಮೀಟರ್‌ಗಿಂತಲೂ ಹೆಚ್ಚು ಉದ್ದವಿರುವ ಐಎನ್‌ಎಸ್ ಸಮರ್ಥಕ್ ಸುಮಾರು 5,000 ಟನ್ ತೂಕ ಹೊಂದಿದೆ. ಇಂಧನ ಮತ್ತು ಕಾರ್ಯಾಚರಣೆಯ ಪರಿಸ್ಥಿತಿಗಳಿಗೆ ಅನುಗುಣವಾಗಿ 7,200 ನಾಟಿಕಲ್ ಮೈಲುಗಳಿಗೂ ಅಧಿಕ ದೂರ ಕ್ರಮಿಸಬಲ್ಲ ಈ ನೌಕೆಯಲ್ಲಿ ಸ್ವದೇಶಿ ಸಂವೇದಕಗಳು, ಶಸ್ತ್ರಾಸ್ತ್ರಗಳು ಹಾಗೂ ಆಧುನಿಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸವಾಲಿನ ಸಮುದ್ರ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸುವಂತೆ ಇದರ ವ್ಯವಸ್ಥೆಗಳನ್ನು ರೂಪಿಸಲಾಗಿದೆ.

ಬಹುಪಯೋಗಿ ನೌಕೆಯ ಸೇರ್ಪಡೆಯಿಂದ ನೌಕಾಪಡೆಯ ಇತರ ಪ್ರಮುಖ ಯುದ್ಧನೌಕೆಗಳು ಮತ್ತು ವಿಮಾನವಾಹಕ ನೌಕೆಗಳನ್ನು ಅವುಗಳ ಮೂಲ ಸಮರ ಕಾರ್ಯಾಚರಣೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ನೆರವಾಗಲಿದೆ. ಗುರಿ ನಿಯೋಜನೆ, ಸಿಬ್ಬಂದಿ ತರಬೇತಿ, ಸರಕು ಸಾಗಣೆ, ಸಮುದ್ರ ಕಣ್ಗಾವಲು ಹಾಗೂ ಅಗತ್ಯ ಕಾರ್ಯಾಚರಣಾ ನೆರವು ಒದಗಿಸುವ ಮೂಲಕ ನೌಕಾಪಡೆಯ ಒಟ್ಟಾರೆ ಕಾರ್ಯಸಾಮರ್ಥ್ಯವನ್ನು ವಿಸ್ತರಿಸುವ ನಿರೀಕ್ಷೆಯಿದೆ.

ಐಎನ್‌ಎಸ್ ಸಮರ್ಥಕ್‌ನ ಲಾಂಛನದಲ್ಲಿ ಸಮುದ್ರದ ಅಲೆಗಳಿಂದ ಮೇಲೇಳುವ ಆಕ್ರಮಣಕಾರಿ ಭಂಗಿಯ ಭಾರತೀಯ ಆನೆಯ ಚಿತ್ರವಿದೆ. ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯದ ಸಂಕೇತವಾಗಿರುವ ಆನೆ ನೌಕೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನೌಕೆಯ ಸಿಬ್ಬಂದಿಯನ್ನು ‘ಪ್ರಚಂಡ ಪುಂಡರೀಕರು’ ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಷ್ಟದಿಗ್ಗಜಗಳಲ್ಲಿ ಪುಂಡರೀಕನೂ ಒಬ್ಬನಾಗಿದ್ದು, ದಕ್ಷಿಣ-ಪೂರ್ವ ದಿಕ್ಕಿನ ರಕ್ಷಕನೆಂದು ಪರಿಗಣಿಸಲಾಗಿದೆ. ‘ವಿಜಯವೇ ನಮ್ಮ ಏಕೈಕ ಗುರಿ’ ಎಂಬುದು ನೌಕೆಯ ಧ್ಯೇಯವಾಕ್ಯವಾಗಿದೆ.

ಯಾವುದೇ ಕಾರ್ಯವನ್ನು ಯಾವುದೇ ಸಮಯದಲ್ಲಿ ನಿರ್ವಹಿಸಲು ಸಿದ್ಧವಾಗಿರುವುದು ಮತ್ತು ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವುದು ಸಮರ್ಥಕ್‌ನ ಪ್ರಮುಖ ವೈಶಿಷ್ಟ್ಯಗಳು. ಸ್ವದೇಶಿ ನಿರ್ಮಾಣ, ಆಧುನಿಕ ತಂತ್ರಜ್ಞಾನ ಮತ್ತು ಬಹುಮುಖ ಕಾರ್ಯನಿರ್ವಹಣೆಯ ಸಮನ್ವಯ ಹೊಂದಿರುವ ಈ ನೌಕೆಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಬಲ ಹೆಚ್ಚುವುದರ ಜೊತೆಗೆ, ದೇಶೀಯ ರಕ್ಷಣಾ ಉತ್ಪಾದನಾ ಕ್ಷೇತ್ರದ ಸಾಮರ್ಥ್ಯಕ್ಕೂ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250