ಕಾರವಾರ ನಗರದ ಹಿಂದೂ ಹೈಸ್ಕೂಲ್ ಪಕ್ಕದ ಫುಟ್‌ಪಾತ್ ವಿವಾದದ ಬೆನ್ನಲ್ಲೇ, ಈಗ ಬಾಯಿ ಕುಂವರ್‌ಬಾಯಿ ಶಾಲೆಯ ಆಟದ ಮೈದಾನದಲ್ಲೇ ಸದ್ದಿಲ್ಲದೆ ಹೊಸ ಬಸ್‌ಸ್ಟಾಪ್ ನಿರ್ಮಾಣ ಕಾರ್ಯ ಆರಂಭಗೊಂಡಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ. ಅದೂ ಸತತ ಮೂರು ದಿನಗಳ ಸರ್ಕಾರಿ ರಜಾ ಅವಧಿಯನ್ನೇ ಆಯ್ದುಕೊಂಡು, ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಇತ್ತ ಸುಳಿಯದಂತೆ ಈ ಕಾಮಗಾರಿ ಕೈಗೆತ್ತಿಕೊಂಡಿರುವುದು ಹತ್ತಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಸೋಮವಾರ ಮಕ್ಕಳು ಶಾಲೆಗೆ ಮರಳುವಷ್ಟರಲ್ಲಿ ಮೈದಾನದ ಜಾಗವನ್ನು ಕಸಿದುಕೊಳ್ಳುವ ಈ ಧಾವಂತದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬ ಚರ್ಚೆ ಶುರುವಾಗಿದೆ.

ಫುಟ್‌ಪಾಥ್‌ಗಳನ್ನು ಮುಕ್ತವಾಗಿಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ, ಅಧಿಕಾರಿಗಳು ನೇರವಾಗಿ ಶಾಲಾ ಮಕ್ಕಳ ಆಟದ ಮೈದಾನಕ್ಕೇ ಕೈಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಓಡಾಡುವ, ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ಸೂಕ್ಷ್ಮ ಪ್ರದೇಶದಲ್ಲಿ ಬಸ್‌ಸ್ಟಾಪ್ ತಲೆಎತ್ತುತ್ತಿರುವುದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಘಾತಗಳಿಗೆ ಹೊಣೆ ಯಾರು ಎಂಬ ಆತಂಕ ನಾಗರಿಕರದ್ದಾಗಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಗರಸಭೆ ಆಯುಕ್ತ ಜಗದೀಶ ಹುಲಗೆಜ್ಜಿ ಅವರು ನ್ಯಾಯಾಲಯದ ತೀರ್ಪಿನಂತೆ ಈ ಜಮೀನು ನಗರಸಭೆಗೆ ಸೇರಿದ್ದಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದಲೇ ಬಸ್‌ಸ್ಟಾಪ್ ನಿರ್ಮಿಸಲಾಗುತ್ತಿದೆ. ಕಾರ್ಮಿಕರ ಲಭ್ಯತೆ ಆಧರಿಸಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಶಾಲೆ ಪ್ರಾರಂಭವಾದ ಸಂದರ್ಭದಲ್ಲಿ ಹಾಗೂ ಶಾಲೆ ಬಿಡುವಿನ ಅವಧಿಯಲ್ಲಿ ಈ ರಸ್ತೆಯಲ್ಲಿ ಟ್ರ್ಯಾಫಿಕ್ ಜಾಮ್ ಸಂಭವಿಸುತ್ತದೆ. ಬೇರೆ ವಾಹನ ಬಂದರೆ, ವಿದ್ಯಾರ್ಥಿಗಳು ಶಾಲೆಗೆ ಸೇರಲು ಪರದಾಡುವಂಥ ಸ್ಥಿತಿ ಇದೆ. ಈ ಸಮಸ್ಯೆಗಳನ್ನು ಪರಿಗಣಿಸದೆ ಬಸ್ ಸ್ಟಾಪ್ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದ್ದು ಸಂಪೂರ್ಣ ನಿರ್ಲಕ್ಷ್ಯತನಕ್ಕೆ ಕಾರಣವಾಗಿದೆ ಎಂದು ಜನ ಆಡಿಕೊಳ್ಳುವಂತಾಗಿದೆ. ಆದಾಗ್ಯೂ, ಮಕ್ಕಳ ಸುರಕ್ಷತೆ ಮತ್ತು ಆಟದ ಮೈದಾನವನ್ನು ಬಲಿಗೊಟ್ಟು ಇಷ್ಟೊಂದು ಹಟಕ್ಕೆ ಬಿದ್ದು ಇದೇ ಜಾಗದಲ್ಲಿ ಬಸ್‌ಸ್ಟಾಪ್ ಕಟ್ಟಬೇಕಾದ ಅನಿವಾರ್ಯತೆ ಯಾರಿಗಿದೆ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ.
