ಕಾರವಾರ: ನಗರದಲ್ಲಿ ಫುಟ್‌ಪಾತ್ ಮೇಲಿನ ಕಾಮಗಾರಿಗೆ ವ್ಯಕ್ತವಾದ ಸಾರ್ವಜನಿಕ ಆಕ್ರೋಶದ ಬಳಿಕವೂ, ಹೇಗಾದರೂ ಮಾಡಿ ಬಸ್ ನಿಲ್ದಾಣ ನಿರ್ಮಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ನಗರಸಭೆಯ ನಡೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಕುವರಬಾಯಿ ಶಾಲೆಯ ಆವರಣದೊಳಗೆ ಕಾನೂನುಬಾಹಿರವಾಗಿ ಕಾಮಗಾರಿ ಮುಂದುವರಿಸುತ್ತಿರುವುದನ್ನು ಖಂಡಿಸಿ ಶಾಲಾ ಹಿತರಕ್ಷಣಾ ಸಮಿತಿ ಹಾಗೂ ಸಾರ್ವಜನಿಕರು ರವಿವಾರ ಕಾರವಾರ ನಗರ ಪೊಲೀಸ್ ಠಾಣೆಗೆ ಅಧಿಕೃತವಾಗಿ ಲಿಖಿತ ದೂರು ಸಲ್ಲಿಸಿದ್ದಾರೆ.

ನಗರಸಭೆಯ ಈ ಕಸರತ್ತು ಏಕೆ! ಆರಂಭದಲ್ಲಿ ನಗರಸಭೆಯು ಸಾರ್ವಜನಿಕರ ಓಡಾಟದ ಫುಟ್‌ಪಾತ್ ಮೇಲೆಯೇ ಬಸ್ ಸ್ಟಾಪ್ ನಿರ್ಮಾಣಕ್ಕೆ ಮುಂದಾಗಿತ್ತು. ಆಗ ಸಾರ್ವಜನಿಕರು ಹಾಗೂ ಮಾಜಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ನಗರಸಭೆ ತಾತ್ಕಾಲಿಕವಾಗಿ ಅಲ್ಲಿ ಕಾಮಗಾರಿ ಸ್ಥಗಿತಗೊಳಿಸಿತ್ತು. ಆದರೆ ಕಾಮಗಾರಿಯನ್ನು ಕೈಬಿಡಲು ಸಿದ್ಧವಿರದ ನಗರಸಭೆ, ಸರ್ಕಾರಿ ರಜೆ ಇದ್ದ ಸಂದರ್ಭವನ್ನು ಕುವರಬಾಯಿ ಶಾಲೆಯ ಆವರಣದ ಒಳಗೇ ಬಸ್ ನಿಲ್ದಾಣದ ಕಾಮಗಾರಿಯನ್ನು ಆರಂಭಿಸಿದ್ದರು. ಇದಕ್ಕೆ ಸ್ಥಳೀಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.
ಕಾನೂನು ಉಲ್ಲಂಘನೆಯ ಆರೋಪ: ಈಗ ವಿವಾದ ಮತ್ತೊಂದು ಮಜಲಿಗೆ ತಲುಪಿದ್ದು, ಶಾಲಾ ಜಾಗವು ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಉಚ್ಚ ನ್ಯಾಯಾಲಯಗಳ ಸ್ಪಷ್ಟ ಆದೇಶದನ್ವಯ ಶಾಲಾ ಆವರಣದ ಜಾಗವನ್ನು ಬೇರೆ ಯಾವುದೇ ಸಾರ್ವಜನಿಕ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಈ ವಿಷಯವಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೂ ದೂರು ನೀಡಿ ಮನವಿ ಸಲ್ಲಿಸಲಾಗಿದ್ದರೂ ಸಹ, ನಗರಸಭೆ ಮತ್ತು ಗುತ್ತಿಗೆದಾರರು ಹಠಮಾರಿ ಧೋರಣೆ ತಳೆದು ಬಲವಂತವಾಗಿ ಶಾಲಾ ಆವರಣದಲ್ಲಿ ಕಾಮಗಾರಿ ಮುಂದುವರಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಅಂತಿಮ ಆದೇಶ ಬರುವವರೆಗೂ ಈ ಕಾನೂನುಬಾಹಿರ ಮತ್ತು ನ್ಯಾಯಾಲಯದ ನಿಂದನೆಯಾಗುವ ಕಾಮಗಾರಿಯನ್ನು ತಕ್ಷಣವೇ ತಡೆಹಿಡಿಯಬೇಕು. ಶಾಲಾ ಆವರಣದ ಸೌಹಾರ್ದತೆ ಕೆಡದಂತೆ ಮತ್ತು ಅಲ್ಲಿ ಯಾವುದೇ ರೀತಿಯ ಶಾಂತಿ ಭಂಗ ಉಂಟಾಗದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಾರ್ವಜನಿಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ವಿನಂತಿಸಿದ್ದಾರೆ. ದೂರು ಸಲ್ಲಿಸುವ ಸಂದರ್ಭದಲ್ಲಿ ಶಾಲಾ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಪ್ರಸಾದ ಕಾಮತ್, ರೂಪೇಶ ನಾಯ್ಕ, ಜ್ಞಾನದೇವ ಗಾವಂಕರ್, ಮಂಜು ರಾವುತ್, ಮಂಗು, ಪ್ರಕಾಶ ಹರಿಕಂತ್ರ, ಪ್ರಮೋದ್ ಹಾರವಾಡೇಕರ್, ದಿನೇಶ, ತಿಮ್ಮಪ್ಪ ಗೌಡ ಸೇರಿದಂತೆ ಅನೇಕ ಮುಖಂಡರು ಹಾಗೂ ಪೋಷಕರು ಉಪಸ್ಥಿತರಿದ್ದು, ನಗರಸಭೆಯ ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರ ತೀವ್ರ ಪ್ರತಿರೋಧದ ನಡುವೆಯೂ ನಗರಸಭೆ ಕಾಮಗಾರಿ ಮುಂದುವರಿಸುತ್ತಿರುವುದು ಸದ್ಯ ಕಾರವಾರ ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
