ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಹೋರಾಟದ ಹೆಸರಲ್ಲಿ ಹಣ ಪಡೆದರೆ ಚಪ್ಪಲಿ ಬೀಳುತ್ತೆ!

Pakka News Web • 29 ಜೂನ್ 2026,

ಕಾರವಾರ:ಹೋರಾಟದ ಹೆಸರಿನಲ್ಲಿ ಜನರಿಂದ ಹಣ ಪಡೆಯುತ್ತೇವೆ ಎನ್ನುವ ಕೆಲವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಒಂದು ವೇಳೆ ನಾವು ಹೋರಾಟದ ಹೆಸರಿನಲ್ಲಿ ಹಣ ಪಡೆದರೆ ಸಾರ್ವಜನಿಕರು ನಮಗೆ ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಜಿಲ್ಲಾ ಅಧ್ಯಕ್ಷ ಅಕ್ಷಯ ನಾಗೇಕರ್ ಅವರು ಹೇಳಿದ್ದಾರೆ.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಸದಾ ಜನಪರ ಧ್ವನಿಯಾಗಿ ಕೆಲಸ ಮಾಡುತ್ತದೆ. ಹೋರಾಟದ ಹೆಸರಿನಲ್ಲಿ ದುಡ್ಡು ಮಾಡುವ ದಲ್ಲಾಳಿ ಸಂಸ್ಕೃತಿ ನಮ್ಮದಲ್ಲ. ಹಣ ಪಡೆದು ರಾಜೀ ಮಾಡಿಕೊಂಡರೆ ಜನ ಒಂದೆರಡು ದಿನ ಸುಮ್ಮನಿರಬಹುದು, ಆದರೆ ಆಮೇಲೆ ತಕ್ಕ ಪಾಠ ಕಲಿಸಿಯೇ ತೀರುತ್ತಾರೆ ಎಂದರು.

ನಗರಸಭೆಯ ಇಂದೋರ್ ಪ್ರವಾಸದ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ?

ಇದೇ ಸಂದರ್ಭದಲ್ಲಿ ಕಾರವಾರ ನಗರಸಭೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಗೇಕರ್, ಸ್ವಚ್ಛತೆಯ ಅಧ್ಯಯನದ ಹೆಸರಿನಲ್ಲಿ ನಗರಸಭೆಯು ಇಂದೋರ್ ಪ್ರವಾಸ ಕೈಗೊಂಡು ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿದೆ. ಆದರೆ, ಈ ಪ್ರವಾಸದಿಂದ ಕಾರವಾರ ನಗರಕ್ಕೆ ಸಿಕ್ಕ ಲಾಭವಾದರೂ ಏನು? ಪ್ರವಾಸ ಮುಗಿದ ಮೇಲೂ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಜನರ ತೆರಿಗೆ ಹಣವನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವ ನಗರಸಭೆಯು ಸಾರ್ವಜನಿಕರಿಗೆ ಸೂಕ್ತ ಉತ್ತರ ನೀಡಲೇಬೇಕು ಎಂದು ಅವರು ಒತ್ತಾಯಿಸಿದರು.

ಮರಳು ಮಾಫಿಯಾಕ್ಕೆ ಬೀಳಲಿ ಬ್ರೇಕ್!

ಜಿಲ್ಲೆಯಲ್ಲಿ ಅವಿರತವಾಗಿ ನಡೆಯುತ್ತಿರುವ ಮರಳು ಅಕ್ರಮದ ದಂಧೆಯ ವಿರುದ್ಧವೂ ಕರವೇ ಧ್ವನಿ ಎತ್ತಿದೆ. ಕಾರವಾರದಿಂದ ಗೋವಾ ಸೇರಿದಂತೆ ವಿವಿಧ ಹೊರರಾಜ್ಯ ಹಾಗೂ ಜಿಲ್ಲೆಗಳಿಗೆ ಕಾನೂನು ಬಾಹಿರವಾಗಿ ಮರಳು ಸಾಗಾಟವಾಗುತ್ತಿರುವುದನ್ನು ತಡೆಯಲು ಈಗಾಗಲೇ ಹಲವು ಪ್ರತಿಭಟನೆಗಳನ್ನು ನಡೆಸಲಾಗಿದೆ. ಈ ಅಕ್ರಮ ಮರಳು ದಂಧೆಗೆ ತಕ್ಷಣವೇ ಬ್ರೇಕ್ ಬೀಳಬೇಕು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250