ಕಾರವಾರ: ತಾಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಾಶಿವಗಡದಲ್ಲಿ ಕಸ ವಿಲೇವಾರಿ ಸಮಸ್ಯೆ ಈಗ ದೊಡ್ಡ ತಿರುವು ಪಡೆದುಕೊಂಡಿದೆ.
ಕಳೆದ ಒಂದೂವರೆ ವರ್ಷದಿಂದ ಸಮರ್ಪಕವಾಗಿ ಕಸ ವಿಲೇವಾರಿ ಆಗದ ಹಿನ್ನೆಲೆಯಲ್ಲಿ ಜುಲೈ 2 ರಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸದಾಶಿವಗಡ ಬಂದ್‌ಗೆ ಕರೆ ನೀಡಿದ್ದರೆ, ಮತ್ತೊಂದೆಡೆ ಇದಕ್ಕೆ ಸದಾಶಿವಗಡ, ಚಿತ್ತಾಕುಲಾದ ಸ್ಥಳೀಯ ನಿವಾಸಿಗಳು ಹಾಗೂ ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರಿಂದಾಗಿ ಗ್ರಾಮದಲ್ಲಿ ಸದ್ಯ ಭಿನ್ನಾಭಿಪ್ರಾಯದ ವಾತಾವರಣ ನಿರ್ಮಾಣವಾಗಿದೆ.

ಬಂದ್ ಕರೆ ನೀಡಿದ್ದ ಕರವೇ ಸಂಘಟನೆ
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕರವೇ ಜಿಲ್ಲಾಧ್ಯಕ್ಷ ಅಕ್ಷಯ ಎಸ್. ಬಿ., ಸದಾಶಿವಗಡದ ತ್ಯಾಜ್ಯ ವಿಲೇವಾರಿ ಘಟಕ ಸಂಪೂರ್ಣ ಸ್ಥಗಿತಗೊಂಡಿದ್ದು, ಮನೆಗಳಿಂದ ಕಸ ಸಂಗ್ರಹಣೆ ನಿಂತುಹೋಗಿದೆ ಎಂದು ಆರೋಪಿಸಿದ್ದರು. ಇದರಿಂದಾಗಿ ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜುಲೈ 2 ರಂದು ಸಂಜೆ 6 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟು ಹಾಗೂ ಖಾಸಗಿ ಕಚೇರಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಕರವೇ ಮನವಿ ಮಾಡಿತ್ತು.
ಕರವೇ ಸಂಘಟನೆ ಬಂದ್ ಕರೆ ನೀಡಿದ ಬೆನ್ನಲ್ಲೇ ಸದಾಶಿವಗಡದ ಪ್ರಮುಖರು, ಕೆಲವು ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರು ಸಭೆ ಸೇರಿ ಬಂದ್ ನಿರ್ಧಾರವನ್ನು ಕಡ್ಡಾಯವಾಗಿ ತಿರಸ್ಕರಿಸಿದ್ದಾರೆ. ಜುಲೈ 2ರಂದು ಯಾವುದೇ ಕಾರಣಕ್ಕೂ ಸದಾಶಿವಗಡದಲ್ಲಿ ಬಂದ್ ಮಾಡುವುದಿಲ್ಲ ಎಂದು ಘೋಷಿಸಿರುವ ಸ್ಥಳೀಯ ಮುಖಂಡರು, ಪ್ರತಿ ಅಂಗಡಿಗಳಿಗೂ ಖುದ್ದಾಗಿ ತೆರಳಿ ವ್ಯಾಪಾರಸ್ಥರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಂದು ವ್ಯಾಪಾರ ವಹಿವಾಟು ಎಂದಿನಂತೆ ಮುಂದುವರಿಯಲಿದೆ ಎಂದು ಅವರು ಪ್ರಚಾರ ನಡೆಸುತ್ತಿದ್ದಾರೆ.
ನಮ್ಮ ಸಮಸ್ಯೆಯನ್ನು ನಾವೇ ನೋಡಿಕೊಳ್ಳುತ್ತೇವೆ:
ಈ ಹೋರಾಟಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಸದಾಶಿವಗಡದ ಪ್ರಮುಖರು, ಕರವೇಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಭಾಗದ ಕಸದ ಸಮಸ್ಯೆಯನ್ನು ನಾವೇ ಸ್ಥಳೀಯವಾಗಿ ಬಗೆಹರಿಸಿಕೊಳ್ಳುತ್ತೇವೆ, ಇದರಲ್ಲಿ ಹೊರಗಿನವರ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವಸಿದ್ಧತೆ ಅಥವಾ ಸ್ಥಳೀಯರ ಸಂಪೂರ್ಣ ಒಪ್ಪಿಗೆ ಇಲ್ಲದೆ ಹಠಾತ್ತನೆ ಬಂದ್ ಕರೆ ನೀಡಿರುವುದಕ್ಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಒಂದೆಡೆ ಬಂದ್ ನಡೆಸಲು ಕರವೇ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಸ್ಥಳೀಯರೇ ಇದನ್ನು ತೀವ್ರವಾಗಿ ವಿರೋಧಿಸುತ್ತಿರುವುದರಿಂದ ಸದಾಶಿವಗಡದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕ ಮೂಡಿದೆ. ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತ ಪೊಲೀಸ್ ಇಲಾಖೆಯು ತಕ್ಷಣ ಕಾರ್ಯಪ್ರವೃತ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಠಾಣೆಗೆ ಉಭಯ ಪಕ್ಷಗಳ (ಕರವೇ ಮತ್ತು ಸ್ಥಳೀಯ ಮುಖಂಡರು) ಪ್ರಮುಖರನ್ನು ಕರೆಸಿದ ಅಧಿಕಾರಿಗಳು ಸಂಧಾನ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
