ಅಂಕೋಲಾ:ತುಮಕೂರು ಹೆದ್ದಾರಿಯಲ್ಲಿ ಪ್ರೇಯಸಿಯ ಎದುರೇ ನಾಗೇಂದ್ರ ಗೌಡ ಎಂಬಾತ ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನಿಗೆ ಬಾಂಬ್ ಪೂರೈಸಿದ್ದ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋಕರ್ಣ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಅಂಕೋಲಾ ಮತ್ತು ತುಮಕೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊನ್ನಾವರದ ಚಂದಾವರ ಮೂಲದ ಒಬ್ಬ ಹಾಗೂ ಸರಳೆಬೈಲಿನ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ನಾಗೇಂದ್ರನ ಸ್ನೇಹಿತರು ಹಾಗೂ ಸಂಬಂಧಿಕರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಈ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಸ್ತುತ ಅಂಕೋಲಾ ಠಾಣೆಯಲ್ಲಿ ಇವರ ತೀವ್ರ ವಿಚಾರಣೆ ಮುಂದುವರಿದಿದೆ.

ತನಿಖೆಯ ವೇಳೆ ಮೃತ ನಾಗೇಂದ್ರ ಗೌಡ ಪೊಲೀಸರಿಗೆ ಯಾವುದೇ ಡಿಜಿಟಲ್ ಸುಳಿವು ಸಿಗದಂತೆ ಸಖತ್ ಪ್ಲಾನ್ ಮಾಡಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಬಾಂಬ್ ಖರೀದಿಸುವ ಮುನ್ನ ಆತ ಮಾರಾಟಗಾರರೊಂದಿಗೆ ಮೊಬೈಲ್‌ನಲ್ಲಿ ಯಾವುದೇ ಮಾತುಕತೆ ನಡೆಸಿರಲಿಲ್ಲ. ಕಾಲ್ ಲಿಸ್ಟ್ ಪರಿಶೀಲಿಸಿದಾಗಲೂ ಬಾಂಬ್ ಕುರಿತ ಸಂವಹನ ಪತ್ತೆಯಾಗಿರಲಿಲ್ಲ. ಬದಲಿಗೆ ಆತ ಖುದ್ದಾಗಿ ಚಂದಾವರಕ್ಕೆ ತೆರಳಿ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿ, ತನ್ನೊಂದಿಗೆ ಒಟ್ಟು ಮೂರು ಬಾಂಬ್‌ಗಳನ್ನು ಖರೀದಿಸಿ ಬೆಂಗಳೂರಿಗೆ ತಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈತ ಈ ಹಿಂದೆಯೂ ಮೀನು ಶಿಕಾರಿಗಾಗಿ ಇದೇ ಜಾಲದಿಂದ ಬಾಂಬ್ ಖರೀದಿಸುತ್ತಿದ್ದ ಎನ್ನಲಾಗಿದೆ.
ಈ ಆತ್ಮಹತ್ಯೆ ಪ್ರಕರಣದ ಬೆನ್ನತ್ತಿದ ತನಿಖಾ ತಂಡಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ನಾಡಬಾಂಬ್ ಹಾಗೂ ಗನ್ ತಯಾರಿಕೆಯ ಬೃಹತ್ ಮತ್ತು ಭೀಕರ ಅಕ್ರಮ ಜಾಲ ಕಂಡುಬಂದಿದ್ದು, ಇಡೀ ತಂಡವೇ ಬೆಚ್ಚಿಬಿದ್ದಿದೆ. ಜಿಲ್ಲೆಯ ಯಲ್ಲಾಪುರ ಹಾಗೂ ಹಳಿಯಾಳ ಭಾಗಗಳಲ್ಲಿ ಅತ್ಯಂತ ಸಕ್ರಿಯವಾಗಿರುವ ಈ ಜಾಲ, ಕೇವಲ 100 ರಿಂದ 300 ರೂಪಾಯಿಗಳ ಅಲ್ಪ ಬೆಲೆಗೆ ನಾಡಬಾಂಬ್‌ಗಳನ್ನು ಮಾರಾಟ ಮಾಡುತ್ತಿದೆ. ಅರಣ್ಯ ಇಲಾಖೆಯ ತೀವ್ರ ನಿರ್ಲಕ್ಷ್ಯದಿಂದಾಗಿ ವರ್ಷದಿಂದ ವರ್ಷಕ್ಕೆ ಈ ಕರಾಳ ಜಾಲ ಹೆಮ್ಮರವಾಗಿ ಬೆಳೆಯುತ್ತಿದ್ದು, ಕಾಡುಪ್ರಾಣಿಗಳ ಬೇಟೆಗೆ ಹಾಗೂ ಜಲಚರಗಳ ಶಿಕಾರಿಗೆ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಇಲ್ಲಿ ತಯಾರಾಗುವ ನಾಡಬಾಂಬ್‌ಗಳ ತೀವ್ರತೆಯು ಅದರಲ್ಲಿ ಬಳಸಲಾಗುವ ನೈಟ್ರೇಟ್ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ನೈಟ್ರೇಟ್ ಹೆಚ್ಚಿದ್ದಷ್ಟೂ ಸ್ಫೋಟದ ತೀವ್ರತೆ ಭೀಕರವಾಗಿರುತ್ತದೆ. ಮುಖ್ಯವಾಗಿ ಕಾಡುಹಂದಿಗಳ ಬೇಟೆಗಾಗಿ ಕೋಳಿ ಮಾಂಸದೊಳಗೆ ಈ ನಾಡಬಾಂಬ್‌ಗಳನ್ನು ಸುತ್ತಿ ಇಡಲಾಗುತ್ತದೆ. ಆಹಾರ ಅರಸಿ ಬರುವ ಹಂದಿಗಳು ಇದನ್ನು ಅಗಿಯುತ್ತಿದ್ದಂತೆ ಉಂಟಾಗುವ ಒತ್ತಡಕ್ಕೆ ಬಾಂಬ್ ಒಮ್ಮೆಲೇ ಬ್ಲಾಸ್ಟ್ ಆಗುತ್ತದೆ. ಈ ಭೀಕರ ಸ್ಫೋಟಕ್ಕೆ ಪ್ರಾಣಿಯ ಮುಖ ಹಾಗೂ ತಲೆ ಭಾಗ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪುತ್ತದೆ. ಹೀಗೆ ಬೇಟೆಯಾಡಿದ ಒಂದು ಕಾಡಹಂದಿಯನ್ನು ಯಾರಿಗೂ ತಿಳಿಯದಂತೆ ರಹಸ್ಯ ಗ್ರಾಹಕರಿಗೆ 7 ರಿಂದ 8 ಸಾವಿರ ರೂಪಾಯಿಗಳಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ.
ಇಷ್ಟೇ ಅಲ್ಲದೆ, ಮೀನು ಸೇರಿದಂತೆ ಜಲಚರಗಳ ಬೇಟೆಗಾಗಿ ಪೆಟ್ರೋಲ್ ಬಾಂಬ್‌ಗಳನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್‌ನಲ್ಲಿ ಬಾಂಬ್ ಸುತ್ತಿ ನೀರಿನೊಳಗೆ ಬಿಟ್ಟಾಗ, ಅದು ನೀರಿನಾಳದಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟಗೊಳ್ಳುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಮೀನುಗಳು ತಕ್ಷಣ ಸಾವನ್ನಪ್ಪಿ ನೀರಿನಾಳದಿಂದ ಮೇಲಕ್ಕೆ ತೇಲಿ ಬರುತ್ತವೆ. ಇನ್ನು ದೊಡ್ಡ ಪ್ರಾಣಿಗಳಾದ ಉಡಾ, ಕಾಡುಕೋಣ ಹಾಗೂ ಕಡವೆಗಳ ಬೇಟೆಗಾಗಿ ನಾಡಬಂದೂಕುಗಳನ್ನು ಬಳಸಲಾಗುತ್ತಿದ್ದು, ಇತ್ತೀಚೆಗೆ ಪೊಲೀಸರು ಮನೆಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೇಟೆಗಾರರು ಈ ಬಂದೂಕುಗಳನ್ನು ತೋಟ ಹಾಗೂ ಗದ್ದೆಗಳಲ್ಲಿ ಮುಚ್ಚಿಡುತ್ತಿದ್ದಾರೆ. ಇದೀಗ ಪ್ರಕರಣದ ಬೇರು ಹಿಡಿದು ಹೊರಟಿರುವ ಪೊಲೀಸರು ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿರುವ ಈ ಇಡೀ ಅಕ್ರಮ ಜಾಲವನ್ನು ಮಟ್ಟಹಾಕಲು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
