ಕಾರವಾರ: ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಅರ್ಹ ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ‘ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ’ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತ ಸಮುದಾಯದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಹಾಗೂ ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಣ ಮತ್ತು ಮಹಿಳಾ ಪ್ರಗತಿ ಇಲಾಖೆಗಳು ಜಂಟಿಯಾಗಿ ನಿಗಾ ವಹಿಸಬೇಕು ಎಂದ ಅವರು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಿ ಮೂಲಸೌಕರ್ಯ ಒದಗಿಸಲು ಆದೇಶಿಸಿದರು. ಅಲ್ಲದೆ, ಕಳೆದ 10 ವರ್ಷಗಳ ವಿದ್ಯಾರ್ಥಿಗಳ ದಾಖಲಾತಿ ಮತ್ತು ಡ್ರಾಪ್‌ಔಟ್ ವಿವರಗಳ ವರದಿಯನ್ನು 10 ದಿನಗಳಲ್ಲಿ ಸಲ್ಲಿಸಲು ನಿರ್ದೇಶನ ನೀಡಿದರು. ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳ ಮೂಲಕ 7.5 ಲಕ್ಷ ರೂ.ವರೆಗೆ ಲಭ್ಯವಿರುವ ಭದ್ರತೆ ರಹಿತ ಶೈಕ್ಷಣಿಕ ಸಾಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಂಜೂರು ಮಾಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚಿಸಿದರು.

ಸ್ಥಳೀಯ ಸಂಸ್ಥೆಗಳ ಕಲ್ಯಾಣ ನಿಧಿಯಲ್ಲಿ ಶೇ. 15 ರಷ್ಟು ಮೊತ್ತವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಡ್ಡಾಯವಾಗಿ ಬಳಸಬೇಕು ಎಂದ ಅಧ್ಯಕ್ಷರು, ಭಟ್ಕಳದ ಒಳಚರಂಡಿ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು. ಜಿಲ್ಲೆಯ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಕಾರ್ಮಿಕ ಇಲಾಖೆಯಿಂದ ವಿಶೇಷ ಶಿಬಿರ ನಡೆಸಿ ಸೌಲಭ್ಯ ತಲುಪಿಸಬೇಕು ಮತ್ತು ಭಟ್ಕಳದಲ್ಲಿ ಒಂದು ವಾರದೊಳಗೆ ಶಿಬಿರ ಆಯೋಜಿಸಿ ವರದಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿ.ಪಂ. ಸಿಇಓ ಡಾ. ದಿಲೀಶ್ ಶಶಿ, ಎಸ್‌ಪಿ ದೀಪನ್, ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸತೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
