ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಜಿಲ್ಲೆಯಲ್ಲಿ 59 ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ!

Pakka News Web • 21 ಸೆಪ್ಟೆಂ 2026,

ಕಾರವಾರ: ಸಾರ್ವಜನಿಕರಿಗೆ ಪಡಿತರ ವಿತರಣೆಯನ್ನು ಮತ್ತಷ್ಟು ಸರಳಗೊಳಿಸುವ ಮತ್ತು ದೂರದ ಸ್ಥಳಗಳಿಗೆ ತೆರಳುವ ಕಷ್ಟ ತಪ್ಪಿಸುವ ನಿಟ್ಟಿನಲ್ಲಿ, ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರದ್ದಾಗಿರುವ ನ್ಯಾಯಬೆಲೆ ಅಂಗಡಿಗಳ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರ ಬೇಡಿಕೆಯಿರುವ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಜಿಲ್ಲಾಡಳಿತ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ಸರ್ಕಾರದ ನಡವಳಿ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಸಭೆಯಲ್ಲಿ (ದಿನಾಂಕ 20-08-2026 ರಂದು) ಅನುಮೋದನೆ ಪಡೆದ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 12 ತಾಲೂಕುಗಳ 59 ಪ್ರದೇಶಗಳಲ್ಲಿ ಈ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಈ ಪ್ರಕ್ರಿಯೆಗೆ ಸೆಪ್ಟೆಂಬರ್ 5 ರಂದು ಅಂಕೋಲಾ ತಾಲೂಕಿನಲ್ಲಿ ಜರುಗಿದ ‘ಪ್ರಜಾ ಸೇವಾ ಅಭಿಯಾನ’ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತ ಚಾಲನೆ ನೀಡಿದ್ದಾರೆ.
ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ) ನಿಯಂತ್ರಣ ಆದೇಶ 2016 ಹಾಗೂ ಕಾಲಕಾಲಕ್ಕೆ ಬಂದ ತಿದ್ದುಪಡಿಗಳನ್ವಯ ಆಸಕ್ತ ಹಾಗೂ ಅರ್ಹರಿರುವ ಸಂಘ-ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ (ವಿಶೇಷವಾಗಿ ವಿಕಲಚೇತನ ಮತ್ತು ತೃತೀಯಲಿಂಗ ವ್ಯಕ್ತಿಗಳಿಗೂ ಅವಕಾಶ ಕಲ್ಪಿಸಲಾಗಿದೆ). ಆಸಕ್ತರು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಕಚೇರಿಯಿಂದ ‘ನಮೂನೆ-ಎ’ ಯಲ್ಲಿ ಅರ್ಜಿಗಳನ್ನು ಪಡೆದುಕೊಂಡು, ನಿಯಮಾನುಸಾರ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 5 ರ ಸಂಜೆ 5:30 ಗಂಟೆಯೊಳಗೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಸಲ್ಲಿಸಿ ಕಡ್ಡಾಯವಾಗಿ ಸ್ವೀಕೃತಿ ಪಡೆದುಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250