ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಅರ್ಹ ಪಡಿತರ ಚೀಟಿದಾರರಿಗೆ ಸೆಪ್ಟೆಂಬರ್ 2026ರ ಮಾಹೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 372 ಕಿಲೋಲೀಟರ್ ಸೀಮೆಎಣ್ಣೆ ಹಂಚಿಕೆಯಾಗಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಅನಿಲ ರಹಿತ 639 ಪಡಿತರ ಚೀಟಿಗಳಿಗೆ ತಲಾ 3 ಲೀಟರ್ ಹಾಗೂ ಒಪ್ಪಿಗೆ ನೀಡಿರುವ ಅನಿಲ ಪಡಿತರ ಚೀಟಿದಾರರಿಗೆ ತಲಾ 2 ಲೀಟರ್ನಂತೆ ಸೀಮೆಎಣ್ಣೆ ವಿತರಿಸಲು ತಾಲೂಕುವಾರು ಮರುಹಂಚಿಕೆ ಮಾಡಲಾಗಿದೆ. ಇದರಂತೆ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ 1,89,054 ಅನಿಲ ಪಡಿತರ ಚೀಟಿಗಳಿಗೆ ತಲಾ 2 ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತದೆ.
ಸೀಮೆಎಣ್ಣೆ ವಿತರಣೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಂದ ಯಾವುದೇ ರೀತಿಯ ಅಕ್ರಮ ಅಥವಾ ಹೆಚ್ಚುವರಿ ದರ ವಸೂಲಿ ನಡೆಯದಂತೆ ಪಡಿತರ ಚೀಟಿದಾರರು ಗಮನಹರಿಸುವಂತೆ ಇಲಾಖೆ ಸೂಚಿಸಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಸೀಮೆಎಣ್ಣೆ ನೀಡುವುದು ಅಥವಾ ಪ್ರತಿ ಲೀಟರ್ಗೆ ನಿಗದಿಪಡಿಸಿರುವ 35 ರೂ.ಗಿಂತ ಹೆಚ್ಚಿನ ದರ ವಸೂಲಿ ಮಾಡುವುದು ಕಂಡುಬಂದಲ್ಲಿ ಪಡಿತರ ಚೀಟಿದಾರರು ಆಹಾರ ಇಲಾಖೆಯ ಉಚಿತ ಸಹಾಯವಾಣಿ 1967ಕ್ಕೆ ದೂರು ಸಲ್ಲಿಸಬಹುದಾಗಿದೆ.
ಇದಲ್ಲದೆ, ತಮ್ಮ ತಾಲೂಕು ವ್ಯಾಪ್ತಿಯ ಆಹಾರ ಶಿರಸ್ತೇದಾರರು ಅಥವಾ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು. ಅಗತ್ಯವಿದ್ದಲ್ಲಿ ಕಾರವಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
