ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಮೀನುಗಾರ ಮಹಿಳೆ ಮೇಲೆ ಹಲ್ಲೆ ಆರೋಪ: ಅಧಿಕಾರಿ ವಿರುದ್ಧ ಸಿಡಿದೆದ್ದ ಜನಪ್ರತಿನಿಧಿಗಳು

Pakka News Web • 22 ಸೆಪ್ಟೆಂ 2026,

ಕಾರವಾರ: ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪ ಮೀನು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಸರ್ಕಾರಿ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಇದೀಗ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

 ಬಡ ಮಹಿಳೆಯರು ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಿದ್ದ ವೇಳೆ ಅಧಿಕಾರಿಯೊಬ್ಬರು ದುಂಡಾವರ್ತನೆ ತೋರಿದ್ದಾರೆ ಎಂಬ ಆರೋಪ ಗಂಭೀರವಾಗಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ–ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮತ್ತು ವಿಧಾನ ಪರಿಷತ್ ಸದಸ್ಯ ಗಣಪತಿ ಡಿ. ಉಳ್ವೇಕರ್ ಆಗ್ರಹಿಸಿದ್ದಾರೆ.

ಮಂಚಿಕೇರಿ ಸಮೀಪದ ಮಾಗೋಡು ಕ್ರಾಸ್ ಬಳಿ ಅಂಕೋಲಾ ತಾಲೂಕಿನ ಬೇಲೆಕೇರಿಯ ಸರಸ್ವತಿ ಅಶೋಕ್ ಕುಡ್ತಲಕರ್ ಮೀನು ಹಾಗೂ ಮಾಗೋಡಿನ ಸೀತಾ ಶಶಿಧರ ಲಮಾಣಿ ತರಕಾರಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ವಿವಾದ ಉಂಟಾಗಿದೆ ಎನ್ನಲಾಗಿದೆ. ರಸ್ತೆ ಬದಿ ವ್ಯಾಪಾರ ನಡೆಸುತ್ತಿರುವುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ ಎಂದು ದೂರಲಾಗಿದೆ. ಹಲ್ಲೆಯ ಸಂದರ್ಭದಲ್ಲಿ ಮೀನುಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿದ್ದು, ಮಹಿಳೆಯರಿಗೆ ಗಾಯಗಳಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಕ್ಕೆ ಗುರಿಯಾಗಿರುವವರು ಬೈಂದೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅಜಯ ಗಣೇಶ ಭಂಡಾರಕರ್ ಎಂದು ಜನಪ್ರತಿನಿಧಿಗಳು ಉಲ್ಲೇಖಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ರೂಪಾಲಿ ಎಸ್. ನಾಯ್ಕ, ಸಾರ್ವಜನಿಕರೊಂದಿಗೆ ಕಾನೂನುಬದ್ಧವಾಗಿ ನಡೆದುಕೊಳ್ಳಬೇಕಾದ ಅಧಿಕಾರಿಯ ಮೇಲೆಯೇ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿರುವುದು ಗಂಭೀರ ವಿಚಾರವಾಗಿದೆ ಎಂದು ಹೇಳಿದ್ದಾರೆ. ಬಡ ಮೀನುಗಾರ ಮಹಿಳೆಯೊಬ್ಬರು ತಮ್ಮ ಜೀವನೋಪಾಯಕ್ಕಾಗಿ ಮೀನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅಧಿಕಾರದ ಪ್ರಭಾವ ಬಳಸಿ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಆರೋಪ ಸತ್ಯವೆಂದು ತನಿಖೆಯಲ್ಲಿ ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಹಿಳೆಯರ ಮೇಲೆ ಕೈ ಮಾಡುವ ಅಧಿಕಾರವನ್ನು ಯಾರೂ ನೀಡಿಲ್ಲ. ಅಧಿಕಾರಿಗಳು ಜನರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಸಾಮಾನ್ಯ ಜನರು ತಮ್ಮ ಜೀವನೋಪಾಯಕ್ಕಾಗಿ ನಡೆಸುವ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಬೇಕೇ ಹೊರತು ದೌರ್ಜನ್ಯದ ಮೂಲಕ ಅಲ್ಲ” ಎಂದು ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.

ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಗಣಪತಿ ಡಿ. ಉಳ್ವೇಕರ್ ಕೂಡ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ನೌಕರನೊಬ್ಬ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೇಲೆಕೇರಿಯಿಂದ ಮಂಚಿಕೇರಿಗೆ ಮೀನು ಮಾರಾಟಕ್ಕೆ ತೆರಳಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಖಂಡನೀಯ. ಆಕೆಯ ಮೀನುಗಳನ್ನು ರಸ್ತೆಗೆ ಚೆಲ್ಲಿದಲ್ಲದೆ, ಪ್ರಶ್ನಿಸಿದ ಮತ್ತೊಬ್ಬ ಮಹಿಳೆಯ ಮೇಲೂ ಹಲ್ಲೆ ನಡೆದಿದೆ ಎಂಬ ದೂರು ಕೇಳಿಬಂದಿದೆ. ಇಂತಹ ಆರೋಪಗಳು ನಿಜವಾಗಿದ್ದರೆ, ಸರ್ಕಾರಿ ಅಧಿಕಾರಿಯ ಸ್ಥಾನದಲ್ಲಿರುವ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಉಳ್ವೇಕರ್ ಒತ್ತಾಯಿಸಿದ್ದಾರೆ.

ಘಟನೆಯಿಂದ ನೊಂದಿರುವ ಮಹಿಳೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ತಿಳಿಸಿರುವ ಉಳ್ವೇಕರ್, ಅವರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರೊಂದಿಗೆ ಈ ಕುರಿತು ಚರ್ಚಿಸಿ, ಅಧಿಕಾರಿಯ ವರ್ತನೆಯ ಬಗ್ಗೆ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

ಮೀನು ಹಾಗೂ ತರಕಾರಿ ಮಾರಾಟದ ವಿಚಾರದಲ್ಲಿ ಆರಂಭವಾದ ವಿವಾದ ಇದೀಗ ಸರ್ಕಾರಿ ಅಧಿಕಾರಿಯ ವರ್ತನೆ ಕುರಿತ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದಲ್ಲಿ ನಿಜವಾಗಿ ಏನಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಮಹಿಳೆಯರ ದೂರಿನ ಆಧಾರದ ಮೇಲೆ ಪೊಲೀಸರು ಘಟನೆಗೆ ಸಂಬಂಧಿಸಿದ ವ್ಯಕ್ತಿಗಳ ಪಾತ್ರ, ಹಲ್ಲೆಯ ಸ್ವರೂಪ ಹಾಗೂ ವಿವಾದಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250