ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 24ರಂದು ಭಾರಿ ಮಳೆಯೊಂದಿಗೆ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇರುವುದರಿಂದ ಜಿಲ್ಲಾಡಳಿತವು ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ. ಹವಾಮಾನ ಪರಿಸ್ಥಿತಿ ಹಾಗೂ ತುರ್ತು ಮಾಹಿತಿಗಾಗಿ ಸಾರ್ವಜನಿಕರು ಜಿಲ್ಲಾಡಳಿತದ ಸಾಮಾಜಿಕ ಜಾಲತಾಣಗಳು ಮತ್ತು ಸ್ಥಳೀಯ ಮಾಧ್ಯಮಗಳ ಮೂಲಕ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ, ಕೆರೆ, ಸಮುದ್ರ ಸೇರಿದಂತೆ ನೀರು ಇರುವ ಪ್ರದೇಶಗಳಿಗೆ ತೆರಳುವುದನ್ನು ಹಾಗೂ ನೀರಿಗೆ ಇಳಿಯುವುದನ್ನು ತಪ್ಪಿಸಬೇಕು. ವಿಶೇಷವಾಗಿ ಮಕ್ಕಳು ಇಂತಹ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಪಾಲಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಮಳೆ ಹಾಗೂ ಸಿಡಿಲಿನ ಸಂದರ್ಭದಲ್ಲಿ ಕೃಷಿಕರು ಕೃಷಿ ಚಟುವಟಿಕೆಗಳಿಂದ ದೂರವಿದ್ದು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಲಾಗಿದೆ. ಮಳೆಯ ವೇಳೆ ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಅನಗತ್ಯವಾಗಿ ಹೊರಗೆ ಸಂಚರಿಸದೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು ಹಾಗೂ ತುಂಡಾದ ವಿದ್ಯುತ್ ತಂತಿಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಹಳೆಯ ಹಾಗೂ ದುರ್ಬಲ ಕಟ್ಟಡಗಳು, ಮರಗಳ ಕೆಳಗೆ ನಿಲ್ಲುವುದನ್ನೂ ತಪ್ಪಿಸಬೇಕು.
ಶಿಥಿಲಾವಸ್ಥೆಯಲ್ಲಿರುವ ಮನೆ ಅಥವಾ ಕಾಂಪೌಂಡ್ ಗೋಡೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಾಲುವೆ, ಸಂಕ ಹಾಗೂ ಕಿರುಸೇತುವೆಗಳನ್ನು ದಾಟುವಾಗ ನೀರಿನ ಪ್ರಮಾಣವನ್ನು ಗಮನಿಸಿ ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ನ 08382-229857 ಸಂಖ್ಯೆಗೆ ಅಥವಾ ವಾಟ್ಸ್ಆ್ಯಪ್ ಮೂಲಕ 9483511015 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
