ಹೊನ್ನಾವರ: ಶರಾವತಿ ನದಿಯಲ್ಲಿ ಪ್ರವಾಸಿ ಬೋಟಿಂಗ್ ವ್ಯವಸ್ಥೆ ಸುಗಮವಾಗಿ ನಡೆಯಲು ಜಾರಿಗೆ ತಂದ ಟೋಕನ್ ಪದ್ಧತಿಯ ನಡುವೆಯೂ, ಅನುಮತಿ ಪಡೆಯದ ಕೆಲವು ಬೋಟ್ಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಸರಕಾರಕ್ಕೆ ಶುಲ್ಕ ಪಾವತಿಸಿ ಅಗತ್ಯ ಅನುಮತಿ ಪಡೆದಿರುವ ಬೋಟ್ ಮಾಲೀಕರಿಗೆ ಬಾಡಿಗೆ ಸಿಗದೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿರುವ ಬೋಟ್ ಮಾಲೀಕರು, ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಹೊನ್ನಾವರದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಬೋಟಿಂಗ್ ಕೌಂಟರ್ನಲ್ಲಿ ಬೋಟ್ ಮಾಲೀಕರು ತಮ್ಮ ಹೇಳಿಕೆಯನ್ನು ನೀಡಿದ್ದು, ಈ ಸಮಸ್ಯೆಗಳಿಗೆ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಟೋಕನ್ ಪಡೆಯುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಬೋಟ್ ಮಾಲೀಕ ಗೋವಿಂದ ಗೌಡ ಮಾತನಾಡಿ, ಸೆಪ್ಟೆಂಬರ್ 4ರಿಂದ ಟೋಕನ್ ವ್ಯವಸ್ಥೆಯಡಿ ಬೋಟಿಂಗ್ ಆರಂಭಗೊಂಡಿದ್ದು, ಮೊದಲ ತಿಂಗಳು ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅನುಮತಿ ಪಡೆಯದ ಬೋಟ್ಗಳು ಕೂಡ ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದರಿಂದ ಅಧಿಕೃತವಾಗಿ ಬೋಟಿಂಗ್ ನಡೆಸುತ್ತಿರುವವರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನಾವು ಸರಕಾರಕ್ಕೆ ಹಣ ಪಾವತಿಸಿ, ಅಗತ್ಯ ಅನುಮತಿ ಪಡೆದು ಪ್ರವಾಸೋದ್ಯಮ ಇಲಾಖೆಯ ಕೌಂಟರ್ ಮೂಲಕ ಟೋಕನ್ ಪಡೆದು ಬೋಟಿಂಗ್ ನಡೆಸುತ್ತಿದ್ದೇವೆ. ಆದರೆ ಕೆಲವು ಬೋಟ್ಗಳು ಟೋಕನ್ ಪಡೆಯದೆ ಪ್ರವಾಸಿಗರನ್ನು ಕರೆದೊಯ್ಯುತ್ತಿವೆ ಎಂಬುದು ನಮ್ಮ ಆರೋಪ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರವಾಸೋದ್ಯಮ ಇಲಾಖೆ ನಮ್ಮಿಂದ ಹಣ ಪಡೆದು ವ್ಯವಸ್ಥೆಯನ್ನು ಜಾರಿಗೆ ತಂದಿರುವಾಗ, ನಿಯಮ ಉಲ್ಲಂಘನೆಯಾಗುತ್ತಿದೆ ಎಂಬ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು.
ಬೋಟ್ ಮಾಲೀಕ ರಮೇಶ ಗೌಡ ಮಾತನಾಡಿ, ಹಲವು ವರ್ಷಗಳಿಂದ ಬೋಟಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಟೋಕನ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಬಾಡಿಗೆ ಹಂಚಿಕೆಯಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ ಬೋಟಿಂಗ್ ಕೌಂಟರ್ಗೆ ಸೂಕ್ತ ಸ್ಥಳ ಮತ್ತು ಅಗತ್ಯ ಸೌಲಭ್ಯಗಳಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಸ್ಥಳದಲ್ಲಿ ಕೌಂಟರ್ ನಿರ್ಮಿಸಿಕೊಡುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕು ಎಂದು ಒತ್ತಾಯಿಸಿದರು.
ಇನ್ನೋರ್ವ ಬೋಟ್ ಮಾಲೀಕ ಗಣೇಶ ಗೌಡ ಮಾತನಾಡಿ, ಟೋಕನ್ ಪದ್ಧತಿಯಿಂದ ಈ ಹಿಂದೆ ವಾರಕ್ಕೊಮ್ಮೆ ಬಾಡಿಗೆ ದೊರೆಯುತ್ತಿದ್ದವರಿಗೂ ಈಗ ಪ್ರತಿದಿನ ಬಾಡಿಗೆ ಸಿಗುವ ಅವಕಾಶ ಸೃಷ್ಟಿಯಾಗಿತ್ತು. ಆದರೆ ಪ್ರಸ್ತುತ ಎದುರಾಗಿರುವ ಸಮಸ್ಯೆಗಳಿಂದ ಆ ವ್ಯವಸ್ಥೆಯ ಪ್ರಯೋಜನ ಸಂಪೂರ್ಣವಾಗಿ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೋಟಿಂಗ್ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಟ್ಟಿಗೆ ಡಿಪೋ ಸಮೀಪದ ಎರಡು ಗುಂಟೆ ಜಾಗವನ್ನು ಕೌಂಟರ್ಗಾಗಿ ಒದಗಿಸುವಂತೆ ಮನವಿ ಮಾಡಿದ್ದರೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು.
ಬೋಟ್ ಮಾಲೀಕ ಸುಬ್ರಾಯ ಅಂಬಿಗ ತನ್ಮಡಿ ತಮ್ಮ ಅನುಭವ ಹಂಚಿಕೊಂಡು, ಬೋಟಿಂಗ್ ಆರಂಭಕ್ಕೂ ಮೊದಲು ನಾಡದೋಣಿ ಮೂಲಕ ಜನರನ್ನು ನದಿ ದಾಟಿಸುವ ಕೆಲಸ ಮಾಡುತ್ತಿದ್ದೆ. ನಂತರ ಬೋಟ್ ಖರೀದಿಸಿ ಪ್ರವಾಸಿ ಬೋಟಿಂಗ್ ವೃತ್ತಿಗೆ ಬಂದೆ. ಆದರೆ ಬಾಡಿಗೆ ಹಂಚಿಕೆಯಲ್ಲಿ ಸಮಾನ ಅವಕಾಶ ದೊರೆಯದಿದ್ದಾಗ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ. ಟೋಕನ್ ವ್ಯವಸ್ಥೆಯಿಂದ ಬಾಡಿಗೆ ಸಿಗುವ ನಿರೀಕ್ಷೆ ಹೆಚ್ಚಿದ್ದು, ಈಗ ಎದುರಾಗಿರುವ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಬೋಟ್ ಮಾಲೀಕ ಹನುಮಂತ ಗೌಡ ಬೇರೊಳ್ಳಿ ಮಾತನಾಡಿ, ಅನುಮತಿ ಪಡೆದ ಬೋಟ್ಗಳಿಗೆ ಹೋಲಿಸಿದರೆ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಲಾಗುತ್ತಿರುವ ಬೋಟ್ಗಳಿಗೆ ಹೆಚ್ಚಿನ ಬಾಡಿಗೆ ದೊರೆಯುತ್ತಿದೆ ಎಂಬುದು ನಮ್ಮ ಅಳಲು. ನಾವು ಅಗತ್ಯ ಶುಲ್ಕ ಪಾವತಿಸಿ ಬೋಟ್ ನಿರ್ವಹಣೆಗೆ ಹಣ ಖರ್ಚು ಮಾಡಿದ್ದರೂ, ಸಮರ್ಪಕ ಬಾಡಿಗೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ಅಧಿಕಾರಿಗಳು ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಬೋಟ್ ಮಾಲೀಕ ಹರೀಶ್ಚಂದ್ರ ನಾಯ್ಕ ಮಾತನಾಡಿ, ಸಮಸ್ಯೆಯ ಕುರಿತು ಚರ್ಚಿಸಲು ಬೋಟ್ ಮಾಲೀಕರು ತಹಸೀಲ್ದಾರ್ ಕಚೇರಿ ಸಮೀಪ ಸೇರಿದ್ದರು. ದೂರವಾಣಿ ಮೂಲಕ ತಹಸೀಲ್ದಾರ್ ಅವರೊಂದಿಗೆ ಮಾತನಾಡಿದಾಗ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 27ರಂದು ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ಮೌಖಿಕ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈ ಭರವಸೆಯ ಹಿನ್ನೆಲೆಯಲ್ಲಿ ಮತ್ತೆ ಕೌಂಟರ್ನಲ್ಲಿ ಟೋಕನ್ ಪಡೆದು ಬೋಟಿಂಗ್ ಮುಂದುವರಿಸಲು ನಿರ್ಧರಿಸಿದ್ದೇವೆ. ನಿಗದಿತ ಸಭೆಯ ಬಳಿಕವೂ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶರಾವತಿ ನದಿಯ ಪ್ರವಾಸೋದ್ಯಮಕ್ಕೆ ಧಕ್ಕೆಯಾಗದಂತೆ, ಅನುಮತಿ ಪಡೆದ ಬೋಟ್ ಮಾಲೀಕರ ಹಿತಾಸಕ್ತಿಯನ್ನೂ ಕಾಪಾಡುವ ರೀತಿಯಲ್ಲಿ ವ್ಯವಸ್ಥೆ ರೂಪಿಸಬೇಕು ಎಂಬುದು ಬೋಟ್ ಮಾಲೀಕರ ಒತ್ತಾಯವಾಗಿದೆ. ಬೋಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ಅನುಮತಿಗಳ ಪರಿಶೀಲನೆ, ನಿಯಮ ಪಾಲನೆಯ ಮೇಲ್ವಿಚಾರಣೆ ಹಾಗೂ ಕೌಂಟರ್ಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
