ಭಟ್ಕಳದ ಸೂಪರ್ ಮಾರ್ಟ್ ಒಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ನಡುವಿನ ಘಟನೆಯೊಂದು ಸದ್ಯ ತಾಲೂಕಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ಜೂನ್ 17 ರಂದು ಸೂಪರ್ ಮಾರ್ಟ್ ನೌಕರ, ಕಾರಗದ್ದೆಯ ನಿವಾಸಿ ಶಾಹೀದ್ ಖಾನ್ ಎಂಬಾತ ಅದೇ ಮಾರ್ಟ್ನಲ್ಲಿ ಕೆಲಸ ಮಾಡುವ ಹಿಂದೂ ಸಮುದಾಯದ ಯುವತಿಯನ್ನು ಮಾತನಾಡಿಸುವ ನೆಪದಲ್ಲಿ ಆಮಂತ್ರಿಸಿ, ಬಳಿಕ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದ ಎನ್ನಲಾಗಿದೆ. ಮಾರುಕೇರಿ ಗ್ರಾಮದಿಂದ ಶಿರಾಲಿ ಚಿತ್ರಾಪುರದ ಗಡೆಹಬ್ಬದ ಕಡೆಗೆ ಚಲಿಸುತ್ತಿದ್ದ ಇವರ ಕಾರು ಮಾರ್ಗಮಧ್ಯೆ ಮಣ್ಣಿನ ರಾಡಿಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ಮಣ್ಣಿನಿಂದ ಹೊರತೆಗೆಯಲು ನೆರವಾಗಲೆಂದು ಹತ್ತಿರ ಬಂದಾಗ ಕಾರಿನೊಳಗಿದ್ದವರ ವರ್ತನೆ ಕಂಡು ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮುಸ್ಲಿಂ ಯುವಕನು ಹಿಂದೂ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆತಂದು ಅನುಚಿತವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರಾದ ಕುಮಾರ ನಾಯ್ಕ ಹಾಗೂ ಶ್ರೀಕಾಂತ ನಾಯ್ಕ ಎಂಬುವವರು ಶಾಹೀದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ತದನಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪರಸ್ಪರ ದೂರು-ಪ್ರತಿದೂರುಗಳು ದಾಖಲಾಗಿವೆ. ತನ್ನ ಮೇಲೆ ಕೈ ಮಾಡಿದವರ ವಿರುದ್ಧ ಶಾಹೀದ್ ಖಾನ್ ದೂರು ನೀಡಿದರೆ, ತನ್ನನ್ನು ಬಲವಂತವಾಗಿ ಕರೆದೊಯ್ದು ಹಿಂಸೆ ನೀಡಿದ ಆರೋಪದ ಮೇಲೆ ನೊಂದ ಯುವತಿಯೂ ಸಹ ಶಾಹೀದ್ ವಿರುದ್ಧ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಆದರೆ, ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಪ್ರತಿಭಟಿಸಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯ ಸಂದರ್ಭದಲ್ಲಿ ಹನುಮಾನ ನಗರದ ಗೋವಿಂದ ನಾಯ್ಕ ಎಂಬುವವರು ಪೊಲೀಸರನ್ನು ನಿಂದಿಸುವುದರ ಜೊತೆಗೆ ಮುಸ್ಲಿಂ ಸಮುದಾಯದ ವಿರುದ್ಧ ತೀವ್ರ ಪ್ರಚೋದನಾಕಾರಿ ಹಾಗೂ ದ್ವೇಷದ ಭಾಷಣ ಮಾಡಿದ್ದರು. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮತ್ತು ದೊಡ್ಡ ಪ್ರಮಾಣದ ಗಲಾಟೆ ಸೃಷ್ಟಿಯಾಗುವ ಸಾಧ್ಯತೆಯಿದ್ದರೂ, ಪೊಲೀಸರ ಸಕಾಲಿಕ ಮಧ್ಯಸ್ಥಿಕೆಯಿಂದ ಅಹಿತಕರ ಘಟನೆಯೊಂದು ತಪ್ಪಿದಂತಾಗಿದೆ. ಸದ್ಯ ಪ್ರಚೋದನಾಕಾರಿ ಭಾಷಣ ಮಾಡಿದ ಗೋವಿಂದ ನಾಯ್ಕ ವಿರುದ್ಧ ಭಟ್ಕಳ ಪಿಐ ನೀಡಿದ ದೂರಿನ ಅನ್ವಯ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಎಲ್ಲಾ ಸರಣಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾರ್ವಜನಿಕ ಶಾಂತಿಗೆ ಭಂಗ ತರಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಸದ್ಯ ಪೊಲೀಸರು ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಸಮಾಜದಲ್ಲಿ ಧರ್ಮಗಳ ನಡುವೆ ಕಹಿ ಉಂಟುಮಾಡುವ ಅಥವಾ ಕೋಮು ಪ್ರಚೋದನೆಗೆ ದಾರಿ ಮಾಡಿಕೊಡುವಂತಹ ಯಾವುದೇ ರೀತಿಯ ಸಂದೇಶ, ವಿಡಿಯೋ ಅಥವಾ ಪೋಸ್ಟ್ಗಳನ್ನು ಹಂಚಿಕೊಳ್ಳದಂತೆ ಜಾಲತಾಣದ ಬಳಕೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ನಿಯಮ ಮೀರಿ ಕಾನೂನು ಕೈಗೆತ್ತಿಕೊಳ್ಳುವ ಅಥವಾ ಪ್ರಚೋದನಾಕಾರಿ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.
