ಡಾ. ದಿಲೀಷ್ ಶಶಿ
ಕಾರವಾರ: ಗ್ರಾಮೀಣ ಭಾಗದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಷ್ಟು ದಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ವರ್ಷಕ್ಕೆ 100 ದಿನಗಳ ಕಾಲ ಸಿಗುತ್ತಿದ್ದ ಉದ್ಯೋಗಾವಕಾಶವನ್ನು ಈಗ ಬರೊಬ್ಬರಿ 125 ದಿನಗಳಿಗೆ ಹೆಚ್ಚಿಸಲಾಗಿದೆ!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್” (VB-GRAM-G) ಹೊಸ ಯೋಜನೆ ಜುಲೈ 1ರಿಂದಲೇ ಜಾರಿಗೆ ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲೂ ಇದರ ಅನುಷ್ಠಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಡಾ. ದಿಲೀಷ್ ಶಶಿ ತಿಳಿಸಿದ್ದಾರೆ.
ಕೂಲಿ ಹಣವೂ ಏರಿಕೆ: 15 ದಿನದಲ್ಲಿ ಖಾತೆಗೆ ಜಮೆ!
ಕೂಲಿಕಾರರಿಗೆ ಕೇವಲ ಕೆಲಸದ ದಿನಗಳು ಮಾತ್ರ ಹೆಚ್ಚಾಗಿಲ್ಲ, ಅದರೊಂದಿಗೆ ದಿನಗೂಲಿಯನ್ನೂ ಸಹ 370 ರೂಪಾಯಿಗಳಿಂದ 382 ರೂಪಾಯಿಗಳಿಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ವಿಶೇಷವೆಂದರೆ, ಎಂದಿನಂತೆ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ಸಿಗಲಿದೆ. ಕೆಲಸ ಮುಗಿದ ಗರಿಷ್ಠ 15 ದಿನಗಳ ಒಳಗಾಗಿ ಕೂಲಿ ಹಣ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಒಂದು ವೇಳೆ ಹಣ ಪಾವತಿ ವಿಳಂಬವಾದರೆ, ಅದಕ್ಕೆ ದಂಡದ ರೂಪದಲ್ಲಿ ಪರಿಹಾರ ನೀಡುವ ಕಟ್ಟುನಿಟ್ಟಿನ ನಿಯಮವನ್ನೂ ತರಲಾಗಿದೆ.
ಕೆಲಸ ನಿಲ್ಲಲ್ಲ, ಆತಂಕ ಬೇಡ!
ಯೋಜನೆ ಬದಲಾಗಿದೆ ಎಂದು ಕೂಲಿಕಾರರು ಆತಂಕ ಪಡುವ ಅಗತ್ಯವಿಲ್ಲ. ಜೂನ್ 30ರವರೆಗೆ ಮನರೇಗಾ ಅಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಹೊಸ ಯೋಜನೆಯ ನಿಯಮಗಳಿಗೆ ಒಳಪಟ್ಟು ತಡೆರಹಿತವಾಗಿ ಮುಂದುವರೆಯಲಿವೆ. ಹಳೆಯ ಉದ್ಯೋಗ ಚೀಟಿಗಳನ್ನೇ (ಜಾಬ್ ಕಾರ್ಡ್) ಮಾನ್ಯ ಮಾಡಿ ಹೊಸ ಯೋಜನೆಯಡಿ ಗ್ಯಾರಂಟಿ ಕಾರ್ಡ್ ನೀಡಲಾಗುತ್ತದೆ. ಯೋಜನೆ ಬದಲಾವಣೆಯ ನೆಪದಲ್ಲಿ ಯಾವೊಬ್ಬ ಕೂಲಿಕಾರನೂ ಒಂದು ದಿನವೂ ಕೆಲಸದಿಂದ ವಂಚಿತರಾಗುವುದಿಲ್ಲ ಎಂದು ಸಿಇಒ ಭರವಸೆ ನೀಡಿದ್ದಾರೆ.
