ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

International

ಈಜುಕೊಳಕ್ಕೆ ಬಿದ್ದ ಗೋವಿನ ಪ್ರಾಣ ರಕ್ಷಿಸಿದ ಪೊಲೀಸರು!

Pakka News Web • 26 ಜುಲೈ 2026,

ಕೇವಲ ಅಪರಾಧ ತಡೆ, ಕಾನೂನು ಸುವ್ಯವಸ್ಥೆಯಷ್ಟೇ ಅಲ್ಲ, ಜೀವ ಉಳಿಸುವ ಕರುಣೆಯಲ್ಲೂ ಖಾಕಿ ಪಡೆ ಸೈ ಎನಿಸಿಕೊಂಡಿದೆ. ದಾಂಡೇಲಿಯ ಸುಭಾಷ್ ನಗರದ ಕ್ರೀಡಾಂಗಣದ ಈಜುಕೊಳಕ್ಕೆ ಆಕಸ್ಮಿಕವಾಗಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಿಡಾಡಿ ಆಕಳೊಂದನ್ನು ಗುಪ್ತವಾರ್ತೆ ವಿಭಾಗದ ಸಿಬ್ಬಂದಿಯೊಬ್ಬರು ನೀರಿಗಿಳಿದು ಸಾಹಸಮಯವಾಗಿ ರಕ್ಷಿಸಿದ ಪ್ರಸಂಗ ರವಿವಾರ ನಡೆದಿದೆ.

ಕ್ರೀಡಾಂಗಣದ ಮೈದಾನದಲ್ಲಿ ಆಟವಾಡುತ್ತಿದ್ದ ಗಣೇಶ ಮತ್ತು ಶಂಭು ಎಂಬ ಬಾಲಕರಿಗೆ ಈಜುಕೊಳದಲ್ಲಿ ಆಕಳೊಂದು ನೀರುಪಾಲಾಗುತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಸ್ಪಂದಿಸಿದ ಮಕ್ಕಳು, ತಡಮಾಡದೇ ಹತ್ತಿರದಲ್ಲೇ ಇದ್ದ ನಗರ ಪೊಲೀಸ್ ಠಾಣೆಗೆ ಓಡಿಹೋಗಿ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಗುಪ್ತವಾರ್ತೆ ವಿಭಾಗದ ನಾಗರಾಜ ನಾಯ್ಕ ಹಾಗೂ ಹವಾಲ್ದಾರ್ ಮಹಾದೇವ ಸಾತಯ್ಯ ಬಳೆಗಾರ ಅವರು ಕ್ಷಣವೂ ವ್ಯರ್ಥ ಮಾಡಲಿಲ್ಲ. ನಾಗರಾಜ ನಾಯ್ಕ ಅವರು ತಕ್ಷಣವೇ ಈಜುಕೊಳಕ್ಕೆ ಧುಮುಕಿ, ಆಕಳನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದರು. ಈ ರಕ್ಷಣಾ ಕಾರ್ಯಾಚರಣೆಗೆ ಹವಾಲ್ದಾರ್ ಮಹಾದೇವ ಸಾತಯ್ಯ ಹಾಗೂ ಸ್ಥಳೀಯ ಗೋ ಸಂರಕ್ಷಕರಾದ ಶ್ರೀನಾಥ ಪಾಸಾಲ್ಕರ, ಚಂದ್ರು ಮಾಳಿ ಮತ್ತು ಬಾಲು ಹಲಗೇಕರ ಕೈಜೋಡಿಸಿದರು.

ಸಮಯಪ್ರಜ್ಞೆ ಮೆರೆದ ಬಾಲಕರು ಹಾಗೂ ಜೀವದ ಹದನೋಡದೆ ನೀರಿಗಿಳಿದ ಪೊಲೀಸರ ಕಾರುಣ್ಯಕ್ಕೆ ದಾಂಡೇಲಿ ಸಾರ್ವಜನಿಕರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

ಈಜುಕೊಳಕ್ಕೆ ಸೂಕ್ತ ಬೇಲಿ ಇಲ್ಲದಿರುವುದು ಮತ್ತು ಭದ್ರತಾ ಸಿಬ್ಬಂದಿಯನ್ನು ನೇಮಿಸದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣ. ನಗರಸಭೆ ತಕ್ಷಣವೇ ಎಚ್ಚೆತ್ತುಕೊಂಡು ಈಜುಕೊಳದ ಸುತ್ತಲೂ ಸೂಕ್ತ ಭದ್ರತಾ ಬೇಲಿ ನಿರ್ಮಿಸಬೇಕು ಹಾಗೂ ಅನಾಹುತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗೋ ಸಂರಕ್ಷಕರು ಮತ್ತು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250