ಕಾರವಾರ:ತಾಲೂಕಿನ ಗ್ರಾಮೀಣ ಪ್ರದೇಶವಾದ ಕಡವಾಡದಲ್ಲಿ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ವಿರೋಧಿಸಿ ಹಾಗೂ ಗ್ರಾಮದ ವಿವಿಧೆಡೆ ಅಪಾಯಕಾರಿ ರೀತಿಯಲ್ಲಿ ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹಬ್ಬ-ಹರಿದಿನಗಳ ಸಂದರ್ಭದಲ್ಲೂ ಯಾವುದೇ ಮುನ್ಸೂಚನೆ ಇಲ್ಲದೆ ಪದೇಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಮನೆ ಹಾಗೂ ಅಂಗಡಿ-ಮುಂಗಟ್ಟುಗಳಲ್ಲಿನ ಫ್ರಿಡ್ಜ್‌ಗಳಲ್ಲಿ ಇರಿಸಲಾದ ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಹಾಳಾಗುತ್ತಿವೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಗುನಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಿಶೋರ ಕಡವಾಡಕರ ಮಾತನಾಡಿ, ಕಡವಾಡ ಭಾಗದ ಶಾಂಬಾವಾಡಾ, ಹಳೇಕೋಟ, ಕುಂಬಾರವಾಡಾ, ಗುನಗಿವಾಡಾ ರಸ್ತೆ ಹಾಗೂ ಶಾಲೆಯ ಸಮೀಪ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟಕ್ಕೆ ಜೋತುಬಿದ್ದಿವೆ. ಯಾವುದೇ ಅನಾಹುತಗಳು ಸಂಭವಿಸುವ ಮುನ್ನವೇ ಹೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಮದ ಇತರ ವಿದ್ಯುತ್ ಸಮಸ್ಯೆಗಳ ಕುರಿತು ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ ಅಧಿಕಾರಿಗಳಿಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಹುತಾತ್ಮ ವೀರ ಯೋಧ ವಿನೋದ ನಾಯ್ಕ ಅವರ ತಂದೆ ಮಹಾದೇವ ಡಿ. ನಾಯ್ಕ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ ಗುನಗಿ, ಗ್ರಾಮ ಪಂಚಾಯಿತಿ ಸದಸ್ಯ ಕಿಶೋರ ಕಡವಾಡಕರ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ ಹಾಗೂ ಪ್ರದೀಪ ಕಡವಾಡಕರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
