ಗೋಕರ್ಣ: ಮೀನುಗಾರಿಕೆಯಿಂದ ಮರಳಿದ ಬೋಟ್ನಲ್ಲಿದ್ದ ಮೀನು ಸಂಗ್ರಹದ ಕೋಣೆಯನ್ನು ಸ್ವಚ್ಛಗೊಳಿಸಲು ಇಳಿದ ಮೂವರು ಮೀನುಗಾರರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ. ಇವರು ತದಡಿಯ ಕುಚೈಮಾ ಬೋಟ್ನಲ್ಲಿ ಮೀನುಗಾರರಾಗಿ ಕೆಲಸ ಮಾಡುತ್ತಿದ್ದರು.
ಚಮನ್ ಮೀನು ಹಿಡಿದು ಬಂದರಿಗೆ ವಾಪಸಾಗಿದ್ದ ಮೀನುಗಾರರು, ಬೋಟ್ನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿದ ಬಳಿಕ ಮೀನು ಸಂಗ್ರಹಿಸುವ ಕೋಣೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ಕೋಣೆಯೊಳಗೆ ಇಳಿದ ಮೀನುಗಾರರು ಏಕಾಏಕಿ ಉಸಿರಾಟದ ತೊಂದರೆಗೆ ಒಳಗಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಮೀನು ಸಂಗ್ರಹದ ಸ್ಥಳದಲ್ಲಿ ವಿಷಕಾರಿ ಅನಿಲ ಸಂಗ್ರಹವಾಗಿದ್ದಿರಬಹುದು ಅಥವಾ ಆಮ್ಲಜನಕದ ಕೊರತೆಯಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಘಟನೆಯ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.
ಮೀನುಗಾರರು ಅಸ್ವಸ್ಥರಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದವರು ರಕ್ಷಣೆಗೆ ಧಾವಿಸಿದ್ದು, ಇಬ್ಬರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಆದರೆ, ಮೂವರು ಮೀನುಗಾರರು ಮೃತಪಟ್ಟಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ತದಡಿ ಬಂದರು ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
