ಕಾರವಾರ:ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ವತಿಯಿಂದ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿಶೇಷ ಹೃದಯ ತಪಾಸಣಾ ಪ್ಯಾಕೇಜ್ ಪ್ರಕಟಿಸಲಾಗಿದೆ. ವಾಡಿಕೆಯ 3,000 ಮೌಲ್ಯದ ಈ ತಪಾಸಣೆಯನ್ನು ಕೇವಲ 1,499 ಕ್ಕೆ ಒದಗಿಸಲಾಗುತ್ತಿದ್ದು, ಸೌಲಭ್ಯವು ಸೆಪ್ಟೆಂಬರ್ 30 ರವರೆಗೆ ಲಭ್ಯವಿರಲಿದೆ ಎಂದು ಸಂಸ್ಥೆಯ ಪ್ರತಿನಿಧಿ ಶಿವಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಿಯಾಯಿತಿ ಪ್ಯಾಕೇಜ್ನಲ್ಲಿ ಇಸಿಜಿ, ಎಕೋ ಅಥವಾ ಟಿಎಂಟಿ, ಲಿಪಿಡ್ ಪ್ರೊಫೈಲ್, ಕ್ರಿಯೇಟಿನೈನ್, ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ (ಆರ್ಬಿಎಸ್) ಸೇರಿದಂತೆ ಸಂಪೂರ್ಣ ರಕ್ತ ಹಾಗೂ ಹೃದಯ ತಪಾಸಣೆಗಳು ಒಳಗೊಂಡಿರಲಿವೆ. ಇದರೊಂದಿಗೆ ಹೃದ್ರೋಗ ತಜ್ಞರ ನೇರ ಸಮಾಲೋಚನೆ ಹಾಗೂ ಸೂಕ್ತ ಆಹಾರ ಪದ್ಧತಿ ಕುರಿತಾದ ವೈದ್ಯಕೀಯ ಮಾರ್ಗದರ್ಶನವೂ ರೋಗಿಗಳಿಗೆ ಲಭ್ಯವಾಗಲಿದೆ ಎಂದು ವಿವರಿಸಿದರು.
ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್ ಅಂಶ ಹೊಂದಿರುವವರು ಮತ್ತು ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿರುವ ವ್ಯಕ್ತಿಗಳು ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ತೀವ್ರ ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ, ಜಂಕ್ ಫುಡ್ ಸೇವನೆ, ದೈಹಿಕ ಶ್ರಮವಿಲ್ಲದ ಜಡ ಜೀವನಶೈಲಿ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜತೆಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಕಾಡುವ ನಿದ್ರಾಹೀನತೆ ಮತ್ತು ಹವಾನಿಯಂತ್ರಿತ ಕೊಠಡಿಗಳಲ್ಲಿ ನಿರಂತರವಾಗಿ ಇರುವುದರಿಂದ ಉಂಟಾಗುವ ನಿರ್ಜಲೀಕರಣದ ಬಗೆಗೂ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕೆಂದು ಅವರು ಕಿವಿಮಾತು ಹೇಳಿದರು.
ಹೃದ್ರೋಗ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಮುನ್ನೆಚ್ಚರಿಕೆ ವಹಿಸಲು ಪ್ರೇರೇಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಮಂಗಳೂರಿನ ಪಂಪ್ವೆಲ್ ಮಹಾವೀರ ಸರ್ಕಲ್ ಬಳಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯಲ್ಲಿ ಈ ತಪಾಸಣೆ ಪಡೆಯಲು ಇಚ್ಛಿಸುವವರು 72590 16560 ಸಂಖ್ಯೆಗೆ ಕರೆ ಮಾಡಿ ಮುಂಗಡ ಕಾಯ್ದಿರಿಸಿಕೊಳ್ಳಬಹುದು ಹಾಗೂ ತುರ್ತು ವೈದ್ಯಕೀಯ ಸೇವೆಗಾಗಿ 0824-2224444 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
