ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಪಶ್ಚಿಮಘಟ್ಟ ಸೂಕ್ಷ್ಮ ವಲಯ ಘೋಷಣೆಗೆ ಮುನ್ನ ಜನರ ಹಕ್ಕು ರಕ್ಷಿಸಿ : ಚಂದ್ರಕಾಂತ ಕೊಚರೇಕರ ಆಗ್ರಹ

Pakka News Web • 19 ಸೆಪ್ಟೆಂ 2026,

ಕಾರವಾರ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯವನ್ನು (ESZ) ಅಂತಿಮವಾಗಿ ಘೋಷಣೆ ಮಾಡುವ ಮುನ್ನ ಅಲ್ಲಿನ ರೈತರು, ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳು ಹಾಗೂ ಪಾರಂಪರಿಕವಾಗಿ ಅರಣ್ಯವನ್ನೇ ಆಶ್ರಯಿಸಿ ಜೀವಿಸುತ್ತಿರುವ ಸ್ಥಳೀಯರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು ಎಂದು ಅರಣ್ಯಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಒತ್ತಾಯಿಸಿದ್ದಾರೆ. ಮುಖ್ಯವಾಗಿ 2015ರ ಪೂರ್ವದ ಅರಣ್ಯಭೂಮಿ ಸಾಗುವಳಿದಾರರು ಸೇರಿದಂತೆ ಸ್ಥಳೀಯರ ಜೀವನೋಪಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಹಾಗೂ ಅವರಲ್ಲಿನ ಆತಂಕವನ್ನು ಹೋಗಲಾಡಿಸಲು ಈ ಹಕ್ಕುಗಳನ್ನು ಕಾನೂನುಬದ್ಧವಾಗಿ ಮತ್ತು ಸ್ಪಷ್ಟ ಪದಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ (ESA) ಅಧಿಸೂಚನೆಯಲ್ಲಿ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸೂಕ್ತ ಶಿಫಾರಸು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಜನವಸತಿ ಪ್ರದೇಶಗಳನ್ನೂ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಸೇರಿಸಿರುವ ಕೇಂದ್ರ ಸರ್ಕಾರದ ಅವಾಸ್ತವಿಕ ಕ್ರಮದ ವಿರುದ್ಧ ತಕ್ಷಣವೇ ಭೌತಿಕ ಸಮೀಕ್ಷೆ ನಡೆಸಿ, ಜನರ ಹಿತರಕ್ಷಣೆಗಾಗಿ ರಚನಾತ್ಮಕ ಸಲಹೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ, ಅರಣ್ಯ ಸಚಿವರಿಗೆ ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಲಕ್ಷಾಂತರ ಬಡ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳು ತಲೆತಲಾಂತರಗಳಿಂದ ವಸತಿ ಹಾಗೂ ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯನ್ನೇ ಅವಲಂಬಿಸಿವೆ. ‘ಉಳುವವನೇ ನಿಜವಾದ ಭೂಮಾಲಕ’ ಎಂಬ ಸರ್ಕಾರದ ನೀತಿಯನ್ವಯ ಇವರಿಗೆ ಭೂಮಿಯ ಕಾನೂನುಬದ್ಧ ಹಕ್ಕು ಈಗಾಗಲೇ ದೊರಕಬೇಕಿತ್ತು. ಆದರೆ 2006ರ ಅರಣ್ಯ ಹಕ್ಕು ಕಾಯ್ದೆ ಹಾಗೂ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದಾಗಿ ಈ ಕುಟುಂಬಗಳ ಬದುಕು ಇನ್ನೂ ಅತಂತ್ರ ಸ್ಥಿತಿಯಲ್ಲೇ ಉಳಿದಿದೆ. ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಪರಿಸರ ಇಲಾಖೆಯು ಯಾವುದೇ ವಾಸ್ತವಿಕ ಮತ್ತು ಭೌತಿಕ ಸಮೀಕ್ಷೆ ನಡೆಸದೆ ಉತ್ತರ ಕನ್ನಡದ 567 ಹಾಗೂ ಶಿವಮೊಗ್ಗದ 447 ಗ್ರಾಮಗಳು ಸೇರಿದಂತೆ ರಾಜ್ಯದ 10 ಜಿಲ್ಲೆಗಳ ಒಟ್ಟು 1,502 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಸೇರಿಸಿ 2026ರ ಜುಲೈ 27ರಂದು 7ನೇ ಕರಡು ಅಧಿಸೂಚನೆ ಹೊರಡಿಸಿದೆ. ಕೃಷಿ, ತೋಟಗಾರಿಕೆ ಹಾಗೂ ದಟ್ಟ ಜನವಸತಿ ಪ್ರದೇಶಗಳ ಮೇಲೆಯೂ ಕಠಿಣ ನಿರ್ಬಂಧಗಳನ್ನು ಹೇರಲು ಹೊರಟಿರುವ ಈ ಕ್ರಮ ಅತ್ಯಂತ ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಾ. ಕಸ್ತೂರಿರಂಗನ್ ವರದಿಯಡಿ ಗುರುತಿಸಲಾದ ಬಹುತೇಕ ಪ್ರದೇಶಗಳು ಈಗಾಗಲೇ ರಕ್ಷಿತ ಅರಣ್ಯ ಹಾಗೂ ಸೂಕ್ಷ್ಮ ಪ್ರದೇಶಗಳಾಗಿದ್ದು, ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳೇ ಸ್ಥಳೀಯರ ದಿನನಿತ್ಯದ ಬದುಕನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈ ಕಾರಣದಿಂದಲೇ ಜನರ ಜೀವನೋಪಾಯ ಹಾಗೂ ಕೃಷಿ-ತೋಟಗಾರಿಕೆ ಚಟುವಟಿಕೆಗಳ ಮೇಲಾಗುವ ದುಷ್ಪರಿಣಾಮಗಳನ್ನು ಗಮನಿಸಿ ರಾಜ್ಯ ಸರ್ಕಾರವು ಕೇಂದ್ರದ 6ನೇ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ಸ್ಪಷ್ಟ ನಿಲುವು ತಳೆದಿತ್ತು. ಆದರೂ ಕೇಂದ್ರ ಸರ್ಕಾರವು ಹಠಮಾರಿ ಧೋರಣೆಯಿಂದ ಮತ್ತೆ 7ನೇ ಕರಡು ಅಧಿಸೂಚನೆ ಹೊರಡಿಸಿರುವುದು ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿಗೆ ಮಾರಕವಾಗಲಿದೆ. ಆದ್ದರಿಂದ ಸರ್ಕಾರವು ರಸ್ತೆ, ಶಾಲೆ, ಕಾಲೇಜು, ಆಸ್ಪತ್ರೆಗಳಂತಹ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ 2015ರ ಡಿಸೆಂಬರ್ 31ರ ಪೂರ್ವದ ಬಗರ್‌ಹುಕುಂ ಸಾಗುವಳಿದಾರರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕೇಂದ್ರದ ಈ ಕರಡು ಪ್ರಸ್ತಾವನೆಯನ್ನು ತಕ್ಷಣವೇ ಮರುಪರಿಶೀಲನೆಗೆ ಒಳಪಡಿಸಿ, ಸಮಗ್ರ ಭೌತಿಕ ಸರ್ವೆ ನಡೆಸಿ, ಖಾಸಗಿ, ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿ ನೆಲೆಸಿರುವ ಕೃಷಿಯಾಧಾರಿತ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ಸ್ಥಳೀಯರ ಹಕ್ಕುಗಳನ್ನು ಶಾಸನಬದ್ಧವಾಗಿ ಅಧಿಸೂಚನೆಯಲ್ಲಿ ಖಾತರಿಪಡಿಸಬೇಕು ಎಂದು ಕೊಚರೇಕರ ಅವರು ಪ್ರಬಲವಾಗಿ ಆಗ್ರಹಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250