ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಮತ್ತು ಕಾರ್ಡ್ನಲ್ಲಿರುವ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚಿಸಿದೆ. ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿದ್ದವರು ಈಗ ಪುನಃ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 5,69,044 ಪಡಿತರ ಚೀಟಿ ಸದಸ್ಯರಿದ್ದು, ಸೆಪ್ಟೆಂಬರ್ 27ರವರೆಗೆ ಕೇವಲ 2,44,930 ಫಲಾನುಭವಿಗಳು ಮಾತ್ರ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಇನ್ನೂ 3,24,114 ಫಲಾನುಭವಿಗಳ ಪ್ರಕ್ರಿಯೆ ಬಾಕಿ ಉಳಿದಿದೆ. ಇ-ಕೆವೈಸಿ ಮಾಡಿಸಿಕೊಳ್ಳಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿದ್ದರೂ, ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.
ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ, ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಪಡಿತರ ಚೀಟಿ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಸಂಪೂರ್ಣವಾಗಿ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ಹಣ ಪಡೆದರೆ, ಸಾರ್ವಜನಿಕರು ಆಹಾರ ಇಲಾಖೆಯ ಗ್ರಾಹಕರ ಸಹಾಯವಾಣಿ 1967 ಅಥವಾ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ ಹಾಗೂ ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿದಾರರೇ ಇ-ಕೆವೈಸಿ ಮಾಡಿಸಿ!
