ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಸಮಸ್ಯೆ ಬಗೆಹರಿಸದ ರಾಜಕಾರಿಗಳ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ : ಆಟೋ ಸಂಘ ಎಚ್ಚರಿಕೆ

Pakka News Web • 29 ಸೆಪ್ಟೆಂ 2026,

ಕಾರವಾರ: ಆಟೋ ಚಾಲಕರು ಮತ್ತು ಮಾಲಕರ ಪ್ರಮುಖ ಬೇಡಿಕೆಗಳಿಗೆ ಶೀಘ್ರವೇ ಪರಿಹಾರ ಕಲ್ಪಿಸದಿದ್ದರೆ ಸಂಬಂಧಪಟ್ಟ ಜನಪ್ರತಿನಿಧಿಗಳ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಉತ್ತರ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ–ಮಾಲಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ.

ಆಟೋರಿಕ್ಷಾಗಳ ಪರ್ಮಿಟ್ ವ್ಯಾಪ್ತಿಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿ.ಮೀ.ಗೆ ವಿಸ್ತರಿಸುವುದು, ಹೊಸ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ ಐದು ವರ್ಷಗಳ ಕಾಲ ಸ್ಥಗಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜಿಲ್ಲಾಡಳಿತ ಕೂಡಲೇ ಈಡೇರಿಸಬೇಕು ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಆಗ್ರಹಿಸಿದರು.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೋ ಚಾಲಕರು ಮತ್ತು ಮಾಲಕರ ಸಮಸ್ಯೆಗಳ ಕುರಿತು ಹಲವು ವರ್ಷಗಳಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುತ್ತಿದೆ. ಮನವಿ, ಸಭೆ ಹಾಗೂ ಹೋರಾಟಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದರೂ ಪ್ರಮುಖ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಫೆಬ್ರವರಿ 12ರಂದು ನಡೆದ ಆರ್‌ಟಿಎ ಸಭೆಯಲ್ಲಿ ಹೊಸ ಪರ್ಮಿಟ್‌ಗಳನ್ನು ಐದು ವರ್ಷಗಳ ಕಾಲ ಸ್ಥಗಿತಗೊಳಿಸುವುದು ಹಾಗೂ ಆಟೋಗಳ ಸಂಚಾರ ವ್ಯಾಪ್ತಿಯನ್ನು 50 ಕಿ.ಮೀ.ಗೆ ಹೆಚ್ಚಿಸುವ ಕುರಿತು ಚರ್ಚಿಸಲಾಗಿತ್ತು. ಜುಲೈ 7ರಂದು ಸಿಎನ್‌ಜಿ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಭರವಸೆ ಕಾರ್ಯರೂಪಕ್ಕೆ ಬರದಿದ್ದರೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದರೊಂದಿಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ವಿಶ್ವನಾಥ ಗೌಡ ಎಚ್ಚರಿಸಿದರು.

ಜಿಲ್ಲೆಯಲ್ಲಿ 7 ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳಿದ್ದು, ಶಿರಸಿ ತಾಲೂಕೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಆಟೋಗಳಿವೆ. ಆಟೋಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ, ಸಂಚಾರ ದಟ್ಟಣೆ ಹಾಗೂ ಚಾಲಕರ ಆದಾಯ ಕುಸಿಯುವ ಸಮಸ್ಯೆ ಎದುರಾಗಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಹೊಸ ಪರ್ಮಿಟ್‌ಗಳ ವಿತರಣೆಯನ್ನು ನಿಯಂತ್ರಿಸಬೇಕು. ಎರಡುಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿರುವ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೇರೆ ಜಿಲ್ಲೆಗಳಲ್ಲಿ ನೋಂದಣಿಯಾಗಿರುವ ಆಟೋಗಳನ್ನು ಖರೀದಿಸಿ ಜಿಲ್ಲೆಯಲ್ಲಿ ಹೊಸ ಪರ್ಮಿಟ್ ಪಡೆಯುವ ಪ್ರಕ್ರಿಯೆಗೂ ಕಡಿವಾಣ ಹಾಕಬೇಕು ಎಂದು ಸಂಘ ಒತ್ತಾಯಿಸಿದೆ.

ಪ್ರಸ್ತುತ ನಗರ ಪ್ರದೇಶಗಳಲ್ಲಿ ಸುಮಾರು 7 ಕಿ.ಮೀ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಕಿ.ಮೀ. ವ್ಯಾಪ್ತಿಗೆ ಆಟೋಗಳ ಸಂಚಾರ ಸೀಮಿತವಾಗಿದೆ. ಇದರಿಂದ ವಾಹನ ಪಾಸಿಂಗ್, ಗ್ಯಾಸ್ ತುಂಬಿಸುವುದು ಸೇರಿದಂತೆ ಅಗತ್ಯ ಕೆಲಸಗಳಿಗಾಗಿ ಚಾಲಕರು ಪರ್ಮಿಟ್ ವ್ಯಾಪ್ತಿಯಿಂದ ಹೊರಗೆ ತೆರಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮುರ್ಡೇಶ್ವರದಂತಹ ಪ್ರಮುಖ ಪ್ರವಾಸಿ ಪ್ರದೇಶದಲ್ಲಿಯೇ 300ಕ್ಕೂ ಹೆಚ್ಚು ಆಟೋಗಳಿದ್ದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಣ 3 ಕಿ.ಮೀ. ಸಂಚಾರಕ್ಕೆ ಮಾತ್ರ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪರ್ಮಿಟ್ ವ್ಯಾಪ್ತಿಯನ್ನು ಕನಿಷ್ಠ 50 ಕಿ.ಮೀ.ಗೆ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಆಟೋಗಳ ಬಳಕೆ ಹಾಗೂ ಸಂಚಾರ ವ್ಯಾಪ್ತಿಯನ್ನು ಪರಿಗಣಿಸಿ ಪ್ರತಿವರ್ಷ ಹೆಚ್ಚುತ್ತಿರುವ ವಿಮೆ ಪ್ರೀಮಿಯಂ ದರವನ್ನು ಕಡಿಮೆ ಮಾಡಬೇಕು. ಸಿಎನ್‌ಜಿ ಪೂರೈಕೆಯಲ್ಲಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು. ಶಿರಸಿ ಮತ್ತು ಮುಂಡಗೋಡಿನ ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಸಿಎನ್‌ಜಿ ಬದಲಿಗೆ ಸಿಬಿಜಿ ಪೂರೈಕೆಯಾಗುತ್ತಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಬೇಕು. ಸಿಬಿಜಿಗೆ ಸಿಎನ್‌ಜಿ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಪರಿಶೀಲನೆಯಾಗಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಶುದ್ಧ ಹಾಗೂ ಅಧಿಕೃತ ಸಿಎನ್‌ಜಿ ನಿರಂತರವಾಗಿ ದೊರೆಯುವ ಕುರಿತು ಜಿಲ್ಲಾಡಳಿತ ಮತ್ತು ಇಂಧನ ಕಂಪನಿಗಳು ಲಿಖಿತ ಭರವಸೆ ನೀಡುವವರೆಗೆ ಹೊಸ ಸಿಎನ್‌ಜಿ ವಾಹನಗಳ ಪಾಸಿಂಗ್, ನೋಂದಣಿ ಹಾಗೂ ಪರ್ಮಿಟ್ ಪ್ರಕ್ರಿಯೆಗೆ ವಿಧಿಸಿರುವ ತಡೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಓಲಾ, ಉಬರ್, ರ್ಯಾಪಿಡೋ ಹಾಗೂ ಬಾಡಿಗೆ ಬೈಕ್‌ಗಳ ಸೇವೆಗೆ ಜಿಲ್ಲೆಯಲ್ಲಿ ಹೊಸದಾಗಿ ಪರವಾನಿಗೆ ನೀಡಬಾರದು. ಈಗಾಗಲೇ ನೀಡಿರುವ ಪರವಾನಿಗೆಗಳನ್ನೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ. ಇಂತಹ ಸೇವೆಗಳ ವಿಸ್ತರಣೆಯಿಂದ ಆಟೋ ಚಾಲಕರ ಆದಾಯದ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.

ಆಟೋ ಚಾಲಕರ ಕುಟುಂಬಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಚಾಲಕರು ಹಾಗೂ ಕುಟುಂಬದವರಿಗೆ ಉಚಿತ ಆರೋಗ್ಯ ಸೇವೆ, ವಿಶೇಷ ಆರೋಗ್ಯ ಕಾರ್ಡ್, 60 ವರ್ಷ ಬಳಿಕ ತಿಂಗಳಿಗೆ ಕನಿಷ್ಠ ₹5 ಸಾವಿರ ಪಿಂಚಣಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಬೇಡಿಕೆ ಸಲ್ಲಿಸಲಾಯಿತು.

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಪ್ರತ್ಯೇಕ ಕಲ್ಯಾಣ ನಿಧಿ ಅಥವಾ ಕಲ್ಯಾಣ ಮಂಡಳಿ ಸ್ಥಾಪಿಸುವುದು, ಜಿಲ್ಲೆಯಲ್ಲಿ ಈಗಿರುವ ಆಟೋ ನಿಲ್ದಾಣಗಳನ್ನು ಅಧಿಕೃತವಾಗಿ ನೋಂದಾಯಿಸುವುದು ಹಾಗೂ ಪೊಲೀಸ್ ಮತ್ತು ರಸ್ತೆ ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಚಾಲಕರ ಕುಂದುಕೊರತೆ ಸಮಿತಿ ರಚಿಸುವಂತೆಯೂ ಸಂಘ ಮನವಿ ಮಾಡಿದೆ.

15 ದಿನಗಳ ಗಡುವಿನೊಳಗೆ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದರ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾಗಬೇಕಾಗುತ್ತದೆ. ಮೊದಲ ಹಂತವಾಗಿ ಕಪ್ಪುಪಟ್ಟಿ ಧರಿಸಿ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವನಾಥ ಗೌಡ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ಗೌರವಾಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷರಾದ ವೆಂಕಟೇಶ ನಾಯ್ಕ, ಶ್ರೀಧರ ನಾಯ್ಕ, ಚಂದ್ರಹಾಸ ನಾಯ್ಕ, ಮಹೇಶ ನಾಯ್ಕ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ಕಾನೂನು ಸಲಹೆಗಾರ ಭೈರವ ಡಿ. ನಾಯ್ಕ ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250