ಹೊನ್ನಾವರ: ತಾಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕೊಳ್ಳಿ ಸಮೀಪ ತಿರುವಿನಲ್ಲಿ ಸ್ಕೂಟಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ, ಸವಾರ ಸ್ಥಳದಲ್ಲೇ ಮೃ*ತಪಟ್ಟು ಹಿಂಬದಿ ಸವಾರ ಗಾಯಗೊಂಡಿರುವ ದಾರುಣ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಶಿರಸಿ ತಾಲೂಕಿನ ಅಮ್ಮಿನಹಳ್ಳಿ ನಿವಾಸಿ ಕೃಷ್ಣ ಗೌಡ (ಮೃತರು) ಅವರು ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೃಷ್ಣ ಗೌಡ ಹಾಗೂ ಹಿಂಬದಿ ಸವಾರ ಮಂಜು ಈರ ಗೌಡ ಅವರು ಶಿರಸಿಯಿಂದ ಸ್ಕೂಟಿ ಮೂಲಕ ಹೊಸಗೋಡಿನಲ್ಲಿದ್ದ ಸಂಬಂಧಿಕರ ಮನೆಗೆ ಹೊರಟಿದ್ದರು. ಚಿಕ್ಕೊಳ್ಳಿ ಸಮೀಪದ ತಿರುವಿನಲ್ಲಿ ಚಾಲಕರ ನಿಯಂತ್ರಣ ತಪ್ಪಿದ ಸ್ಕೂಟಿ ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳಿದೆ.
ಅಪಘಾತದ ತೀವ್ರತೆಗೆ ಸವಾರ ಕೃಷ್ಣ ಗೌಡ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಹಿಂಬದಿ ಸವಾರ ಮಂಜು ಈರ ಗೌಡ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹೊನ್ನಾವರ ಪೊಲೀಸ್ ಠಾಣೆಯ ಪಿಐ ಸಿದ್ದರಾಮೇಶ್ವರ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಂದಕಕ್ಕೆ ಉರುಳಿದ ಸ್ಕೂಟಿ ಸವಾರ ಸ್ಥಳದಲ್ಲೇ ಸಾ*ವು!
