ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ತದಡಿ ದೋಣಿ ವಿವಾದ: ಹಣ ವಸೂಲಿ ಆರೋಪ ತಳ್ಳಿಹಾಕಿದ ಅಮೋದ್

Pakka News Web • 14 ಆಕ್ಟೋ 2026,

ಕಾರವಾರ:ತದಡಿ ಪ್ರವಾಸೋದ್ಯಮದ ದೋಣಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗಿರುವ ಹಣ ವಸೂಲಿ ಆರೋಪಗಳನ್ನು ಭಾರತೀಯ ಯುವ ಕಾಂಗ್ರೆಸ್‌ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅಮೋದ್ ಸಿರ್ಸಿಕರ್ ತಳ್ಳಿಹಾಕಿದ್ದಾರೆ. ದೋಣಿ ಮಾಲೀಕರಿಂದ ಎನ್ಒಸಿ ಕೊಡಿಸುವ ನೆಪದಲ್ಲಿ ತಾವು ಯಾವುದೇ ಹಣ ಪಡೆದಿಲ್ಲ. ಆರೋಪ ಮಾಡುವವರು ಸೂಕ್ತ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಕಾರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಾಹಿತಿಯ ಪ್ರಕಾರ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ 20 ದೋಣಿಗಳಿಗೆ ಎನ್ಒಸಿ ದೊರೆತಿದೆ. ದೋಣಿ ಮಾಲೀಕರಿಗೆ ನಿಯಮಗಳು ಹಾಗೂ ಅಗತ್ಯ ದಾಖಲೆಗಳ ಕುರಿತು ಮಾರ್ಗದರ್ಶನ ನೀಡಿದ್ದೇನೆ. ಇದನ್ನು ಹಣ ವಸೂಲಿ ಎಂದು ಬಿಂಬಿಸುವುದು ಸರಿಯಲ್ಲ ಎಂದರು.

ದೋಣಿ ಕಾರ್ಯಾಚರಣೆಗಳಿಂದ ತಾವು ದಿನಕ್ಕೆ ₹1 ಲಕ್ಷದಿಂದ ₹1.5 ಲಕ್ಷ ಸಂಪಾದಿಸುತ್ತಿದ್ದೇನೆ ಎಂಬ ಆರೋಪಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ಅಂಕಿಅಂಶಗಳಿಗೆ ಯಾವ ಆಧಾರವಿದೆ ಎಂಬುದನ್ನು ಆರೋಪ ಮಾಡಿದವರು ಸ್ಪಷ್ಟಪಡಿಸಬೇಕು. ದೋಣಿಗಳ ಒಟ್ಟು ಆದಾಯವನ್ನು ವೈಯಕ್ತಿಕ ಸಂಪಾದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತಮ್ಮ ವಿರುದ್ಧ ಆರೋಪ ಮಾಡಿರುವ ನಾಯಕರು ತಮ್ಮೊಂದಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ GETHNAA ಅಧಿಕಾರಿಗಳ ಬಳಿ ಬಂದು ದಾಖಲೆಗಳನ್ನು ಪರಿಶೀಲಿಸಲಿ. ಸತ್ಯಾಂಶ ತಿಳಿದುಕೊಳ್ಳಲು ತಾವು ಸಿದ್ಧರಿದ್ದು, ಕಾನೂನುಬದ್ಧ ತನಿಖೆಗೂ ಸಹಕರಿಸುವುದಾಗಿ ತಿಳಿಸಿದರು.

ತದಡಿ ಪ್ರವಾಸೋದ್ಯಮ ಅಭಿವೃದ್ಧಿ, ಸ್ಥಳೀಯರ ಜೀವನೋಪಾಯ ಹಾಗೂ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು. ವೈಯಕ್ತಿಕ ಆರೋಪಗಳ ಬದಲಿಗೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಅಮೋದ್ ಸಿರ್ಸಿಕರ್ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಆನಂದ, ರಾಜೇಶ, ಪ್ರಕಾಶ, ದಿನೇಶ, ಕಿರಣ ಇದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250