ದಾಂಡೇಲಿ ತಾಲೂಕಿನ ಅಂಬಿಕಾ ನಗರದ ಪವರ್ ಹೌಸ್ ಸಮೀಪದ ಮುಖ್ಯ ರಸ್ತೆಯಲ್ಲಿ ಶನಿವಾರ ಕರಡು ಕಂಡು ಬಂದಿದೆ. ದಟ್ಟ ಅರಣ್ಯದಿಂದ ಕರಡಿಯೊಂದು ಏಕಾಏಕಿ ನಡುರಸ್ತೆಯಲ್ಲಿ ಪ್ರತ್ಯಕ್ಷವಾಗಿ ನಿರಾಳವಾಗಿ ಓಡಾಡಲಾರಂಭಿಸಿದೆ. ಸ್ಥಳೀಯರು ಹಾಗೂ ವಾಹನ ಸವಾರರು ಕರಡಿಯನ್ನು ಕಂಡು ಒಂದು ಕ್ಷಣ ದೆಂಗುಬಡಿದಂತಾಗಿದ್ದಾರೆ. ರಸ್ತೆಯ ಮಧ್ಯದಲ್ಲೇ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿದ್ದ ಕರಡಿಗೆ ಮುಂಭಾಗದಿಂದ ವಾಹನವೊಂದು ಬರುತ್ತಿರುವುದು ಗೋಚರಿಸಿದೆ. ವಾಹನದ ಸದ್ದಿಗೆ ಒಮ್ಮೆಲೇ ಗಾಬರಿಗೊಂಡ ಆ ವನ್ಯಜೀವಿ, ಎದುರಿಗೆ ಹೋಗುವ ಧೈರ್ಯ ಮಾಡದೆ ತಕ್ಷಣವೇ ಹಿಂದಿರುಗಿ ರಸ್ತೆಯ ಮೇಲೆಯೇ ದಿಕ್ಕಾಪಾಲಾಗಿ ಓಡಲು ಶುರು ಮಾಡಿದೆ. ಕರಡಿ ರಸ್ತೆಯುದ್ದಕ್ಕೂ ಭಯದಿಂದ ಓಡುತ್ತಿರುವ ಈ ರೋಮಾಂಚನಕಾರಿ ದೃಶ್ಯವನ್ನು ವಾಹನದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕರಡಿಯ ಆಗಮನದಿಂದ ಸ್ಥಳೀಯ ನಿವಾಸಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಕರಡಿ ಸಂಚಾರ: ಜನರಲ್ಲಿ ಆತಂಕ
