ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅರ್ಚಕರೊಬ್ಬರನ್ನು ಪೂಜೆಯ ನೆಪವೊಡ್ಡಿ ಕರೆದೊಯ್ದು ಭೀಕರವಾಗಿ ಹ*ತ್ಯೆಗೈದು ತೋಟದಲ್ಲೇ ಹೂತುಹಾಕಿದ್ದ ಆರು ವರ್ಷಗಳ ಹಿಂದಿನ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಕುಮಟಾ ತಾಲೂಕಿನ ಮುರೂರಿನ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಅವರ ಕೊ*ಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು, ಕೃತ್ಯವೆಸಗಿದ ಮೂವರು ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಕುಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಮತ್ತು ಸೊರಬ ಮೂಲದ ಧನಂಜಯ ಚಂದ್ರಶೇಖರ್ ನಾಯ್ಕ ಶಿಕ್ಷೆಗೆ ಗುರಿಯಾದ ದೋಷಿಗಳು.
2018ರ ಅಕ್ಟೋಬರ್ 16ರಂದು ಭೂಮಿಯ ಪೂಜೆ ಮಾಡಿಕೊಡುವಂತೆ ಅರ್ಚಕರನ್ನು ಕರೆದೊಯ್ದಿದ್ದ ಆರೋಪಿಗಳು, ಕುಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಸಾಕ್ಷ್ಯನಾಶಕ್ಕಾಗಿ ಶ*ವವನ್ನು ಅಲ್ಲಿಯೇ ಗುಂಡಿ ತೋಡಿ ಮುಚ್ಚಿ, ಅವರ ಬೈಕನ್ನು ಸಮೀಪದ ಬಾವಿಗೆ ಎಸೆದು ಪರಾರಿಯಾಗಿದ್ದರು.
ಪತಿ ಕಾಣೆಯಾದ ಬಗ್ಗೆ ವಿಶ್ವೇಶ್ವರ ಭಟ್ ಅವರ ಪತ್ನಿ ಸರಸ್ವತಿ ಭಟ್ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಕುಮಟಾ ಪೊಲೀಸರು (ಅಂದಿನ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ತಂಡ), ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದರು. ನಂತರ ಹೂತಿಟ್ಟಿದ್ದ ಶ*ವವನ್ನು ಹೊರತೆಗೆದು ಶವಪರೀಕ್ಷೆ ನಡೆಸಿ ಸತ್ಯಾಂಶ ಬಯಲಿಗೆಳೆದಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ಅವರು ಬಲವಾದ ಸಾಕ್ಷ್ಯಾಧಾರಗಳನ್ನು ಮಂಡಿಸಿದ್ದರು. ಪ್ರಾಸಿಕ್ಯೂಷನ್ ಒಟ್ಟು 62 ಸಾಕ್ಷಿಗಳನ್ನು, 177 ನಿರ್ಣಾಯಕ ದಾಖಲೆಗಳನ್ನು ಹಾಗೂ 15 ಮುದ್ದೆಮಾಲುಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿತ್ತು. ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಆರೋಪಿಗಳ ಮೇಲಿನ ಕೊಲೆ ಕೃತ್ಯ ನಿಸ್ಸಂದೇಹವಾಗಿ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ನ್ಯಾಯ ಒದಗಿಸಿದೆ.
