ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್/ಡಿಎಆರ್) ನೇರ ನೇಮಕಾತಿ ಲಿಖಿತ ಪರೀಕ್ಷೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡಿದೆ.
ಮಿಕ್ಕುಳಿದ ವೃಂದದ 1,421 ಹಾಗೂ ಸ್ಥಳೀಯ ವೃಂದದ 179 ಸೇರಿದಂತೆ ಒಟ್ಟು 1,600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸೆ.6ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮಾಜಾಳಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪರೀಕ್ಷೆ ಪಾರದರ್ಶಕವಾಗಿ ಮತ್ತು ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದೆ ನಡೆಯುವಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಾಯ್ದೆ-2023ರ ಕಲಂ 163ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿ ಸಭೆ, ಸಮಾರಂಭ ಹಾಗೂ ಶಾಂತಿಭಂಗಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಧ್ವನಿವರ್ಧಕ ಬಳಕೆಯನ್ನೂ ನಿರ್ಬಂಧಿಸಲಾಗಿದೆ.
ಇದೇ ವೇಳೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿರುವ ಝೆರಾಕ್ಸ್ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷೆ ಮುಗಿಯುವವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಮೊಬೈಲ್ ಫೋನ್, ಮೈಕ್ರೋಫೋನ್, ಸ್ಮಾರ್ಟ್ ವಾಚ್, ವೈರ್ಲೆಸ್ ಅಥವಾ ಬ್ಲೂಟೂತ್ ಸಾಧನಗಳು, ಇಯರ್ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
