ಸೆಪ್ಟೆಂಬರ್ 5, 2026
ಶನಿವಾರ

ನಮ್ಮನ್ನು ಅನುಸರಿಸಿ

Crime

ಡೀಸೆಲ್ ಕಳ್ಳತನ ಪ್ರಕರಣ: ಅಂತರ ಜಿಲ್ಲಾ ಕಳ್ಳರ ಬಂಧನ

Pakka News Web • 4 ಸೆಪ್ಟೆಂ 2026,

ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಯ ಡೀಸೆಲ್ ಟ್ಯಾಂಕ್‌ನಿಂದ ಸುಮಾರು 14,500 ರೂ. ಮೌಲ್ಯದ 140 ಲೀಟರ್ ಡೀಸೆಲ್ ಕಳ್ಳತನ ಮಾಡಿದ್ದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

2026ರ ಆಗಸ್ಟ್ 28ರ ರಾತ್ರಿ 9 ಗಂಟೆಯಿಂದ ಆಗಸ್ಟ್ 29ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ, ಬಾಬು ಎಂಬುವವರಿಗೆ ಸೇರಿದ ಟಿಪ್ಪರ್ ಲಾರಿ ಸಂಖ್ಯೆ KA-17-D-9894ರ ಡೀಸೆಲ್ ಟ್ಯಾಂಕ್‌ನಲ್ಲಿದ್ದ ಸುಮಾರು 140 ಲೀಟರ್ ಡೀಸೆಲ್ ಕಳ್ಳತನವಾಗಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಮೇಲಾಧಿಕಾರಿಗಳ ನಿರ್ದೇಶನದಂತೆ ಅನುಭವಿ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಮೊಗ್ಗ ಜಿಲ್ಲೆಯ ಕಾಳಿಕಾನಗರ, ಪಿಳ್ಳಂಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದವರಾದ ಯೂನೂಸ್ (28), ಮಹಮ್ಮದ್ ಗೌಸ್ (38) ಹಾಗೂ ಸೈಯ್ಯದ್ ಸಿಕಂದರ್ (22) ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಅಶೋಕ್ ಲೇಲ್ಯಾಂಡ್ ವಾಹನ ಸಂಖ್ಯೆ KA-14-B-1126 ಸೇರಿದಂತೆ ಡೀಸೆಲ್ ಕಳ್ಳತನಕ್ಕೆ ಬಳಸಿದ್ದ ಇತರ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ಕಾನೂನುಬದ್ಧವಾಗಿ ಬಂಧಿಸಿ, ಸೂಕ್ತ ರಿಮಾಂಡ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆಯು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಹಾಗೂ ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಪೊಲೀಸ್ ಉಪನಿರೀಕ್ಷಕ ಮಹಾಂತೇಶ ವಾಲ್ಮೀಕಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮನೋಜ್ ಡಿ., ರವಿ ನಾಯ್ಕ, ಗಜಾನನ ನಾಯ್ಕ, ಶಿವಾನಂದ ನಾಗರದಿನ್ನಿ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಹಮ್ಮದ್ ಶಫೀ, ಗಿರೀಶ್ ಮತ್ತು ಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250
ಪ್ರಚಾರ M48
ಜಾಹೀರಾತು ಸ್ಥಳ ಲಭ್ಯವಿದೆ
336x280