ಸೆಪ್ಟೆಂಬರ್ 5, 2026
ಶನಿವಾರ

ನಮ್ಮನ್ನು ಅನುಸರಿಸಿ

Uttara-Kannada

ವಿಜ್ಞಾನ ಶಿಕ್ಷಕ ಸಂತೋಷ ಕಾಂಬಳೆ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Pakka News Web • 3 ಸೆಪ್ಟೆಂ 2026,

ಕಾರವಾರ: ತಾಲೂಕಿನ ಗಡಿಭಾಗದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಂತೋಷ ಕಾಂಬಳೆ ಅವರು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಈ ಗೌರವವನ್ನು ಪ್ರಕಟಿಸಿದೆ.

ಎಂ.ಎಸ್ಸಿ., ಬಿ.ಎಡ್. ಪದವೀಧರರಾಗಿರುವ ಸಂತೋಷ ಕಾಂಬಳೆ ಅವರು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಬಿತ್ತುವ ಮೂಲಕ ಗ್ರಾಮೀಣ ಭಾಗದ ಮಕ್ಕಳ ನೆಚ್ಚಿನ ಗುರುವಾಗಿ ಗುರುತಿಸಿಕೊಂಡಿದ್ದಾರೆ. ಕ್ಲಿಷ್ಟಕರವೆನಿಸುವ ವಿಜ್ಞಾನ ವಿಷಯವನ್ನು ಪ್ರಾಯೋಗಿಕ ಚಟುವಟಿಕೆಗಳು, ನೈಜ ಉದಾಹರಣೆಗಳು ಹಾಗೂ ಕಥೆಗಳ ಮೂಲಕ ಸರಳವಾಗಿ ಬೋಧಿಸುತ್ತಾ, ಮಕ್ಕಳಲ್ಲಿ ವಿಜ್ಞಾನದ ಕುತೂಹಲವನ್ನು ಹೆಚ್ಚಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತರಗತಿಯಲ್ಲಿ ಕೇವಲ ಅಂಕಗಳಿಕೆಯನ್ನೇ ಪ್ರಧಾನವಾಗಿಸದೆ, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.

ಶಾಲೆಯ ನಾಲ್ಕು ಗೋಡೆಗಳ ಆಚೆಗೂ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿರುವ ಇವರು, ಜಿಲ್ಲಾಮಟ್ಟದ ವಿವಿಧ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಸಕ್ರಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಕ್ಷಕ ವೃಂದಕ್ಕೂ ಮಾರ್ಗದರ್ಶನ ನೀಡುತ್ತಿದ್ದಾರೆ. ಗಡಿಭಾಗದ ಶಾಲೆಯಿಂದ ಹೊರಬಂದ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಸ್ಥಾನಮಾನಕ್ಕೇರಲು ಇವರ ನಿಸ್ವಾರ್ಥ ಪರಿಶ್ರಮ ಮತ್ತು ಪ್ರೇರಣೆಯೇ ಮುಖ್ಯ ಕಾರಣವಾಗಿದೆ. ವಿದ್ಯಾರ್ಥಿ ಸಮೂಹಕ್ಕೆ ಕೇವಲ ಶಿಕ್ಷಕರಾಗಿರದೆ, ಅವರ ಭವಿಷ್ಯ ರೂಪಿಸುವ ಬೆನ್ನೆಲುಬಾಗಿ ನಿಂತಿರುವ ಸಂತೋಷ ಕಾಂಬಳೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದಕ್ಕೆ ಶಾಲಾ ಆಡಳಿತ ಮಂಡಳಿ, ಸಹಶಿಕ್ಷಕರು, ಪಾಲಕರು ಹಾಗೂ ಹಳೆಯ ವಿದ್ಯಾರ್ಥಿಗಳು ತೀವ್ರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250
ಪ್ರಚಾರ M48
ಜಾಹೀರಾತು ಸ್ಥಳ ಲಭ್ಯವಿದೆ
336x280