ಕಾರವಾರ:ದಾಂಡೇಲಿ ನಗರದಲ್ಲಿ ಬಡವರಿಗಾಗಿ ನಿರ್ಮಿಸಲಾಗುತ್ತಿರುವ ಜಿ+2 ವಸತಿ ಯೋಜನೆಯ ಮನೆಗಳನ್ನು ಶೀಘ್ರ ವಿತರಿಸುವಂತೆ ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ, ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಅವರು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರಿಗೆ ಲಿಖಿತ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪಿಎಂಎವೈ ಹಾಗೂ ಆಶ್ರಯ ಯೋಜನೆಯಡಿ ಆಯ್ಕೆಯಾದ 850 ಫಲಾನುಭವಿಗಳಿಂದ ನಗರಸಭೆಯು ಸುಮಾರು ₹9 ಕೋಟಿ ವಂತಿಗೆ ಸಂಗ್ರಹಿಸಿ 2018 ರಲ್ಲಿ ಮನೆಗಳ ನಿರ್ಮಾಣ ಆರಂಭಿಸಿತ್ತು. ಆದರೆ ಎರಡು ವರ್ಷಗಳ ಹಿಂದೆ ಕೇವಲ 108 ಮನೆಗಳನ್ನು ಮಾತ್ರ ಹಸ್ತಾಂತರಿಸಲಾಗಿದ್ದು, ಅದರಲ್ಲಿ ಆದೇಶಪತ್ರ ಪಡೆಯದ ಕಾರಣ 23 ಮನೆಗಳು ಇಂದಿಗೂ ಖಾಲಿ ಬಿದ್ದಿವೆ. ಈ ಅನ್ಯಾಯದ ವಿರುದ್ಧ ನಡೆದ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕಳೆದ ಮೇ 12 ರಂದು ನಗರಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದರು. ಕಾಮಗಾರಿ ಪೂರ್ಣಗೊಂಡಿರುವ 84 ಮನೆಗಳನ್ನು ತಿಂಗಳೊಳಗೆ ಹಸ್ತಾಂತರಿಸಲು ಹಾಗೂ ಉಳಿದ 192 ಫಲಾನುಭವಿಗಳಿಗೆ ಸಾಲಮೇಳದ ಮೂಲಕ ಬ್ಯಾಂಕ್ ಸಾಲ ಕೊಡಿಸಲು ಆದೇಶಿಸಿದ್ದರು.
ಆದರೆ ನಾಲ್ಕು ತಿಂಗಳು ಕಳೆದರೂ ಜಿಲ್ಲಾಧಿಕಾರಿಗಳ ನಡವಳಿಕೆಯನ್ನು ಅಧಿಕಾರಿಗಳು ಜಾರಿಗೆ ತಂದಿಲ್ಲ. ಸಿದ್ಧವಾಗಿರುವ 84 ಮನೆಗಳು ಕಳೆದ ಎಂಟು ತಿಂಗಳಿಂದ ಹಂಚಿಕೆಯಾಗದೆ ಉಳಿದಿವೆ. 192 ಮಂದಿಯಲ್ಲಿ 29 ಫಲಾನುಭವಿಗಳು ಅಂತಿಮ ಕಂತಿನ ₹1,20,000 ಹಣ ಪಾವತಿಸಿದ್ದರೂ ಹಾಗೂ ಜುಲೈ 29 ರಂದು ಸಾಲಮೇಳ ನಡೆದಿದ್ದರೂ ನಗರಸಭೆಯು ದಾಖಲೆ ಒದಗಿಸದ ಕಾರಣ ಬ್ಯಾಂಕುಗಳು ಸಾಲ ಮಂಜೂರು ಮಾಡಿಲ್ಲ. ಜತೆಗೆ ಬಡಾವಣೆಯಲ್ಲಿ ರಸ್ತೆ, ಚರಂಡಿ, ಬೀದಿದೀಪದಂತಹ ಕನಿಷ್ಠ ಸೌಕರ್ಯಗಳಿಲ್ಲದೆ, ಸ್ವಚ್ಛತೆಯ ಕೊರತೆಯಿಂದ ರಾತ್ರಿ ವೇಳೆ ಮೊಸಳೆ ಸೇರಿದಂತೆ ವನ್ಯಜೀವಿಗಳ ಓಡಾಟ ಹೆಚ್ಚಾಗಿ ಜನರಲ್ಲಿ ಭೀತಿ ಮೂಡಿಸಿದೆ.
ಜಿಲ್ಲಾಧಿಕಾರಿಗಳ ಆದೇಶವನ್ನೇ ಧಿಕ್ಕರಿಸಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸಬೇಕು ಮತ್ತು ಬಾಕಿ ಮನೆಗಳನ್ನು ಕೂಡಲೇ ವಿತರಿಸಬೇಕು; ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಕ್ರಂ ಖಾನ್ ಎಚ್ಚರಿಸಿದ್ದಾರೆ.
