ಚುನಾವಣೆ ಬಂದಾಗ ಮಾತ್ರ ಎಸ್ಟಿ ಕೂಗು ಏಕೆ? ವರ್ಷಗಳ ಹೋರಾಟಕ್ಕೆ ಇನ್ನೆಷ್ಟು ಕಾಲ ಭರವಸೆ? ಮಾಧವ ನಾಯಕ
ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯವನ್ನು ಇನ್ನು ಮುಂದೆ ಕೇವಲ ಚುನಾವಣಾ ಪ್ರಚಾರದ ಸರಕಾಗಿ ಬಳಸಿಕೊಳ್ಳುವ ರಾಜಕೀಯ ಪರಿಪಾಠಕ್ಕೆ ಕಡಿವಾಣ ಹಾಕಬೇಕು. ವರ್ಷಗಳಿಂದ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಹಾಲಕ್ಕಿ ಸಮುದಾಯಕ್ಕೆ ಕೇವಲ ಭರವಸೆ, ಭೇಟಿ, ವೇದಿಕೆ ಹಾಗೂ ಪ್ರಚಾರ ಸಾಕಾಗಿದೆ; ಅವರ ಬೇಡಿಕೆಗೆ ನಿರ್ಣಾಯಕ ಕ್ರಮ ಯಾವಾಗ? ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ. ನಾಯಕ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಹಾಲಕ್ಕಿ ಸಮುದಾಯದ ಅಧ್ಯಕ್ಷರು ಹಿರಿಯ ನಾಟಿ ವೈದ್ಯ ಹನುಮಂತಗೌಡ ಅವರ ನೇತೃತ್ವದಲ್ಲಿ ಮಹಿಳೆಯರು ಹಾಗೂ ಸಮುದಾಯದ ಮುಖಂಡರು, ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಾಲಕ್ಕಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಮನವಿ ಸಲ್ಲಿಸಿರುವುದು ಸ್ವಾಗತಾರ್ಹ. ಆದರೆ ಇಂತಹ ಮನವಿಗಳು ಕೇವಲ ಮತ್ತೊಂದು ಭರವಸೆಯಾಗಿ ಉಳಿಯದೆ, ಸರ್ಕಾರದ ಮುಂದಿನ ಸ್ಪಷ್ಟ ಕ್ರಮಕ್ಕೆ ದಾರಿ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣೆ ಬಂದಾಗ ಹಾಲಕ್ಕಿ ಸಮುದಾಯ ನೆನಪಾಗುತ್ತದೆ; ಚುನಾವಣೆ ಮುಗಿದ ಮೇಲೆ ಅವರ ಬೇಡಿಕೆ ಮರೆತುಹೋಗುತ್ತದೆ. ಈ ಪರಿಪಾಠಕ್ಕೆ ಯಾವಾಗ ಅಂತ್ಯ?” ಎಂದು ಮಾಧವ ನಾಯಕ ಪ್ರಶ್ನಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಹಾಲಕ್ಕಿ ಸಮುದಾಯದ ದಿ. ತುಳಸಿ ಗೌಡ ಮತ್ತು ದಿ. ಸುಕ್ರಿ ಬೊಮ್ಮಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಂಕೋಲಾದಲ್ಲಿ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಸುಕ್ರಿ ಬೊಮ್ಮಗೌಡ ಅವರು ಹಾಲಕ್ಕಿ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ವರದಿಯಾಗಿದೆ.
ಅಂತಹ ಮಹತ್ವದ ಕ್ಷಣವೂ ನಡೆಯಿತು. ಸಮುದಾಯದ ಹಿರಿಯರು ಸ್ವತಃ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದರು. ಆದರೆ ಇಂದಿಗೂ ಹಾಲಕ್ಕಿ ಸಮಾಜದ ಎಸ್ಟಿ ಬೇಡಿಕೆ ಏಕೆ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂಬುದನ್ನು ಸರ್ಕಾರಗಳು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಮಾಧವ ಬಿ. ನಾಯಕ ಹೇಳಿದ್ದಾರೆ.
ಫೋಟೋ ಬೇಡ, ಫಲಿತಾಂಶ ಬೇಕು; ವೇದಿಕೆ ಬೇಡ, ಸ್ಥಾನಮಾನಕ್ಕೆ ಸಂಬಂಧಿಸಿದ ನಿರ್ಣಾಯಕ ಕ್ರಮ ಬೇಕು; ಚುನಾವಣಾ ಭರವಸೆ ಬೇಡ, ಹಾಲಕ್ಕಿ ಸಮಾಜದ ಭವಿಷ್ಯಕ್ಕೆ ನ್ಯಾಯ ಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ಅಂಕೋಲಾ ತಾಲೂಕಿನ ಹಟ್ಟಿ ಕೇರಿಗೆ ತಮ್ಮ ಪಕ್ಷದ ಅಭ್ಯರ್ಥಿಯ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಹಾಲಕ್ಕಿ ಸಮುದಾಯದ ಪದ್ಮಶ್ರೀ ಪುರಸ್ಕೃತರಾದ ದಿವಂಗತ ಸುಕ್ರಿ ಬೊಮ್ಮು ಗೌಡ ಮತ್ತು ತುಳಸಿ ಗೌಡ ಇವರನ್ನು ವೇದಿಕೆಗೆ ಕರೆದು ಆಶೀರ್ವಾದ ಪಡೆದ ಭಾವಚಿತ್ರ ಪ್ರಚಾರದ ಸಾಧನವಾಗಿದೆ ಎಂದು ಮಾಧವ ನಾಯಕ್ ಅಭಿಪ್ರಾಯಪಟ್ಟಿದ್ದಾರೆ,
ರಾಜ್ಯ ಅಥವಾ ಕೇಂದ್ರ—ಯಾವುದೇ ಸರ್ಕಾರವಾಗಲಿ, ಯಾವುದೇ ರಾಜಕೀಯ ಪಕ್ಷವಾಗಲಿ ಹಾಲಕ್ಕಿ ಸಮುದಾಯವನ್ನು ಚುನಾವಣಾ ಪ್ರಚಾರದ ಸಾಧನವನ್ನಾಗಿ ಬಳಸಿಕೊಳ್ಳದೆ, ಅವರ ಎಸ್ಟಿ ಬೇಡಿಕೆಯ ಕುರಿತು ಕೈಗೊಂಡಿರುವ ಕ್ರಮಗಳು, ಬಾಕಿ ಇರುವ ಪ್ರಕ್ರಿಯೆಗಳು ಮತ್ತು ಮುಂದಿನ ಹಂತವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಹಾಲಕ್ಕಿ ಸಮುದಾಯದ ಭಾವನೆಗಳೊಂದಿಗೆ ರಾಜಕೀಯ ಮಾಡದೆ, ಅವರ ಹಕ್ಕಿನ ಪ್ರಶ್ನೆಗೆ ಶಾಶ್ವತ ಪರಿಹಾರದ ದಾರಿ ತೋರಿಸಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ. ನಾಯಕ ಆಗ್ರಹಿಸಿದ್ದಾರೆ.
