ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ!

Pakka News Web • 23 ಸೆಪ್ಟೆಂ 2026,

ಕಾರವಾರ: ಕದ್ರಾ–ಮಲ್ಲಾಪುರ ಮಾರ್ಗದಲ್ಲಿ ಪದೇಪದೇ ಉಂಟಾಗುತ್ತಿರುವ ಬಸ್ ಸಂಚಾರದ ಅವ್ಯವಸ್ಥೆಯಿಂದ ಆಕ್ರೋಶಗೊಂಡ ಪ್ರಯಾಣಿಕರು ಬುಧವಾರ ಕಾರವಾರದ ಮುಖ್ಯ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಬಸ್ ವ್ಯವಸ್ಥೆ ಸರಿಪಡಿಸುವವರೆಗೆ ನಿಲ್ದಾಣದಿಂದ ಯಾವುದೇ ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನಾಕಾರರು ಕೆಲಕಾಲ ಬಸ್‌ಗಳನ್ನು ತಡೆದರು.

ಕಳೆದ ಹಲವು ದಿನಗಳಿಂದ ವಿಶೇಷವಾಗಿ ಸಂಜೆ ವೇಳೆಯಲ್ಲಿ ಕದ್ರಾ–ಮಲ್ಲಾಪುರ ಮಾರ್ಗದ ಬಸ್ ಸಂಚಾರ ಸಮರ್ಪಕವಾಗಿಲ್ಲ ಎಂಬುದು ಪ್ರಯಾಣಿಕರ ಆರೋಪವಾಗಿದೆ. ಈ ಕುರಿತು ಹಲವು ಬಾರಿ ಡಿಪೋ ವ್ಯವಸ್ಥಾಪಕರು ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಮಧ್ಯಾಹ್ನದಿಂದ ಕದ್ರಾ–ಮಲ್ಲಾಪುರ ಮಾರ್ಗದಲ್ಲಿ ಮೂರು ಟ್ರಿಪ್‌ಗಳು ಇರಬೇಕಾಗಿದ್ದರೂ ಬಸ್‌ಗಳು ನಿಗದಿತ ಸಮಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು. ಬಸ್‌ಗಾಗಿ ನಿಲ್ದಾಣದಲ್ಲೇ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೇಸತ್ತ ಪ್ರಯಾಣಿಕರು ಏಕಾಏಕಿ ಪ್ರತಿಭಟನೆಗೆ ಇಳಿದು, ನಿಲ್ದಾಣದಲ್ಲಿ ಇತರ ಬಸ್‌ಗಳ ಸಂಚಾರಕ್ಕೂ ಅಡ್ಡಿಪಡಿಸಿದರು.

ಬಸ್ ವ್ಯವಸ್ಥೆ ಸರಿಪಡಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪ್ರಯಾಣಿಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು. ಬಳಿಕ ಪ್ರಯಾಣಿಕರು ಪ್ರತಿಭಟನೆ ಕೈಬಿಟ್ಟು ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕದ್ರಾ–ಮಲ್ಲಾಪುರ ಮಾರ್ಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರು. ಆದರೆ ಮುಂದೆ ಇದೇ ರೀತಿಯ ಅವ್ಯವಸ್ಥೆ ಮುಂದುವರಿದರೆ ಮತ್ತೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಹಾಗೂ ಪ್ರಯಾಣಿಕರು ಎಚ್ಚರಿಕೆ ನೀಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250