ಕಾರವಾರ: ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಮೂವರು ಮೀನುಗಾರರು ಮೃತಪಟ್ಟ ದುರಂತಕ್ಕೆ ಸಂಬಂಧಿಸಿದಂತೆ, ಮೀನುಗಾರಿಕಾ ಸಚಿವ ಕೆ.ಎಸ್. ಬಸವಂತಪ್ಪ ಅವರು ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಸಚಿವರು, ಮಕ್ಕಳ ಶಿಕ್ಷಣಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದರು.
ತದಡಿ ಮೀನುಗಾರಿಕಾ ಬಂದರಿನಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿತ್ತು. ‘ಕುಜೈಮಾ’ ಹೆಸರಿನ ಮೀನುಗಾರಿಕಾ ಬೋಟ್ನಲ್ಲಿ ಹಿಡಿದ ಮೀನುಗಳನ್ನು ಇಳಿಸಿದ ಬಳಿಕ, ಕೊಳೆತು ದುರ್ವಾಸನೆ ಬೀರುತ್ತಿದ್ದ ‘ಚಮನ್’ ಮೀನಿನ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಮೀನುಗಾರರು ವಿಷಕಾರಿ ಅನಿಲ ಸೇವಿಸಿ ಅಸ್ವಸ್ಥರಾಗಿದ್ದರು. ಈ ಪೈಕಿ ಮೂವರು ಮೃತಪಟ್ಟಿದ್ದು, ಮತ್ತಿಬ್ಬರು ಅಸ್ವಸ್ಥರಾಗಿದ್ದರು.
ಮೃತರನ್ನು ಹಿಣಿ ಕಾಗಾಲ್ನ ನೌಶಾದ್ (37), ಹುಬ್ಬಣಗಿರಿಯ ಅಮೀನ್ (39) ಹಾಗೂ ವನ್ನಳ್ಳಿಯ ಅಮನ್ ಲಂಗಡೋ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕುಮಟಾ ತಾಲೂಕಿನ ಬೆಟಗುಳಿಯ ಯಾಕೂಬ್ (64) ಹಾಗೂ ಸಂತೆಗುಳಿಯ ಖಾದಿರ್ (35) ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಯಾಕೂಬ್ ಅವರ ಸ್ಥಿತಿ ಗಂಭೀರವಾಗಿದ್ದು, ಖಾದಿರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ದುರಂತದಿಂದಾಗಿ ಮೃತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಸಚಿವರು ಸರ್ಕಾರದ ವತಿಯಿಂದ ನೆರವು ಒದಗಿಸುವ ಭರವಸೆ ನೀಡಿದರು. ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರದ ಚೆಕ್ ವಿತರಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಘಟನೆಗೆ ಕಾರಣವಾದ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಮೀನುಗಾರಿಕಾ ಬಂದರುಗಳಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ಸಂದರ್ಭದಲ್ಲಿ ಇಂತಹ ಅಪಾಯಕಾರಿ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ ಸೇರಿದಂತೆ ಹಲವು ಮುಖಂಡರು ಹಾಗೂ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.
