ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Trending

ಗಾಯಗೊಂಡ ಬೃಹತ್ ಹೆಬ್ಬಾವಿನ ರಕ್ಷಣೆ!

Pakka News Web • 28 ಆಕ್ಟೋ 2026,

ಮುಂಡಗೋಡ: ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ, ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ಒರಲಗಿ ಗಸ್ತಿನ ಅರಣ್ಯ ಸರ್ವೆ ನಂ. 138ರ KFDF ನೆಡುತೋಪಿನಲ್ಲಿ ಕೂಲಿ ಕಾರ್ಮಿಕರು ನೆಡುತೋಪಿನ ನಿರ್ವಹಣಾ ಕೆಲಸದಲ್ಲಿ ತೊಡಗಿದ್ದ ವೇಳೆ, ಮೈಮೇಲೆ ಗಾಯಗಳಾಗಿ ಒದ್ದಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಮಿಕರು ಈ ವಿಷಯವನ್ನು ಅರಣ್ಯ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ.

ವಿಷಯ ತಿಳಿದ ಅರಣ್ಯ ಸಿಬ್ಬಂದಿ, ಉರಗ ರಕ್ಷಕರಾದ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸುನೀಲ್ ಹೊನ್ನಾವರ ಅವರು ಗಾಯಗೊಂಡ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ. ಬಳಿಕ ಒರಲಗಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹನುಮಂತಪ್ಪ ಕೋಣನಕೇರಿ ಅವರ ಮನೆಗೆ ಕರೆದೊಯ್ದು ಅಗತ್ಯ ಔಷಧೋಪಚಾರ ಮಾಡಲಾಗಿದೆ.

ಚಿಕಿತ್ಸೆಯ ಬಳಿಕ ಹೆಬ್ಬಾವನ್ನು ಜನರ ಸಮ್ಮುಖದಲ್ಲಿ ಒರಲಗಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು. ಅರಣ್ಯದಲ್ಲಿ ಗಾಯಗೊಂಡಿದ್ದ ಉರಗಕ್ಕೆ ಸಕಾಲದಲ್ಲಿ ನೆರವು ನೀಡುವ ಮೂಲಕ ಅರಣ್ಯ ಸಿಬ್ಬಂದಿ ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿಯನ್ನು ಮೆರೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯಪಾಲಕ ಜಯವಂತ ಬೋವಿ, ಅರಣ್ಯ ವೀಕ್ಷಕ ಮನ್ಸೂರ್ ಮರಗಡಿ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250