ಕಾರವಾರ: ನಗರದ ಮಕ್ಕಳ ಉದ್ಯಾನವನದಿಂದ ಮಯೂರವರ್ಮ ವೇದಿಕೆಯವರೆಗೆ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿರುವ ಕಿರು ಉದ್ಯಾನವನ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದ್ದು, ಗಿಡಗಂಟಿಗಳು ಬೆಳೆದು ಹಸಿರು ಪರಿಸರ ಕಣ್ಮರೆಯಾಗುತ್ತಿದೆ. ನಗರಸಭೆ ತಕ್ಷಣ ಗಮನಹರಿಸಿ ಉದ್ಯಾನವನವನ್ನು ಹಿಂದಿನ ಸೌಂದರ್ಯಕ್ಕೆ ಮರಳಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.
ಹಿಂದೆ ನಗರಸಭೆಯ ಪೌರಾಯುಕ್ತರಾಗಿದ್ದ ಆರ್.ಪಿ. ನಾಯ್ಕ ಅವರ ಅವಧಿಯಲ್ಲಿ ಹಸಿರು ಪಟ್ಟಣ ನಿರ್ಮಿಸುವ ಹಾಗೂ ಬೀಚ್ಗೆ ವಿಹರಿಸಲು ಬರುವ ಜನರಿಗೆ ಸುಂದರ ಮತ್ತು ಆಹ್ಲಾದಕರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಹೆದ್ದಾರಿ ಪಕ್ಕದಲ್ಲಿ ಸಾಲುಸಾಲಾಗಿ ಕಿರು ಉದ್ಯಾನವನ ನಿರ್ಮಿಸಿ ವಿವಿಧ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಇದರಿಂದ ಆ ಪ್ರದೇಶ ಹಸಿರಿನಿಂದ ಕಂಗೊಳಿಸುವುದರ ಜತೆಗೆ ಸಾರ್ವಜನಿಕರಿಗೆ ಮನಮುದ ನೀಡುವ ವಾತಾವರಣ ನಿರ್ಮಾಣವಾಗಿತ್ತು.

ಆದರೆ, ಕಾಲಕ್ರಮೇಣ ನಗರಸಭೆಯಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಉದ್ಯಾನವನದ ಸ್ಥಿತಿ ಹದಗೆಟ್ಟಿದೆ. ಗಿಡಗಳಿಗೆ ನೀರುಣಿಸದೆ ಕೆಲವು ಗಿಡಗಳು ಒಣಗಿದ್ದು, ಮತ್ತೊಂದೆಡೆ ಬೇಡದ ಗಿಡಗಂಟಿಗಳು ಬೆಳೆದು ಉದ್ಯಾನವನದ ಸೌಂದರ್ಯಕ್ಕೆ ಧಕ್ಕೆಯುಂಟುಮಾಡಿವೆ. ಇದೇ ಪರಿಸ್ಥಿತಿ ರಾಕ್ ಗಾರ್ಡನ್ ಎದುರಿನ ಪ್ರದೇಶದಲ್ಲಿಯೂ ಕಂಡುಬರುತ್ತಿದ್ದು, ಅಲ್ಲಿನ ಹಸಿರು ವಾತಾವರಣ ಮಾಯವಾಗಿ ಅನಗತ್ಯ ಗಿಡಗಂಟಿಗಳು ಬೆಳೆದಿವೆ. ನಗರದ ಸೌಂದರ್ಯ ಹೆಚ್ಚಿಸಬೇಕಾದ ಸ್ಥಳಗಳೇ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಎರಡೂ ಸ್ಥಳಗಳನ್ನು ನಗರಸಭೆ ನಿರ್ಲಕ್ಷಿಸದೆ, ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಗಿಡಗಳ ಆರೈಕೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೆಳೆದು ನಿಂತಿರುವ ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿ, ಒಣಗಿರುವ ಗಿಡಗಳ ಬದಲಿಗೆ ಹೊಸ ಗಿಡಗಳನ್ನು ನೆಟ್ಟು ಉದ್ಯಾನವನವನ್ನು ಹಿಂದಿನಂತೆ ಸುಂದರವಾಗಿ ರೂಪಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ. ಅರ್ಗೇಕರ್ ಒತ್ತಾಯಿಸಿದ್ದಾರೆ.
ನವೆಂಬರ್ 1ರೊಳಗಾಗಿ ಉದ್ಯಾನವನದ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಂಡು ಅದರ ಹಿಂದಿನ ಸೌಂದರ್ಯವನ್ನು ಮರುಸ್ಥಾಪಿಸಬೇಕು. ಇಲ್ಲವಾದಲ್ಲಿ ನಗರಸಭೆಯ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
