ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಸೈಂಟ್ ಮಿಲಾಗ್ರಿಸ್ ಸಹಕಾರಿಗೆ 9.11 ಕೋಟಿ ಲಾಭ!

Pakka News Web • 28 ಸೆಪ್ಟೆಂ 2026,

ಸದಸ್ಯಗ್ರಾಹಕರ ನಂಬಿಕೆ-ವಿಶ್ವಾಸವೇ ಮಿಲಾಗ್ರಿಸ್ ಸಹಕಾರಿ ಬೆಳವಣಿಗೆಗೆ ಕಾರಣ: ಫಾದರ್ ಡೆಸ್ಮಂಡ್ ರೆಬೆಲ್ಲೊ

ಕಾರವಾರ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯು ಸಹಕಾರಿಯ ಸಭಾಭವನ, ಫೀನಿಕ್ಸ್ ಪ್ಯಾರಾಡೈಸ್ನಲ್ಲಿ ನಡೆಯಿತು.
ವಂದನೀಯ ಫಾದರ್ ಡೆಸ್ಮಂಡ್ ರೆಬೆಲ್ಲೊ ಅವರು ಬೈಬಲ್ ವಾಚಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಮೇಲೆ ಸದಸ್ಯರು ಇಟ್ಟಿರುವ ವಿಶ್ವಾಸ, ನಂಬಿಕೆ, ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಉತ್ತಮ ಬಾಂಧ್ಯವ ಸೇರಿದಂತೆ ಹಲವು ಕಾರಣಗಳಿಂದ ಸೈಂಟ್ ಮಿಲಾಗ್ರಿಸ್ ಸಹಕಾರಿ ಸಂಸ್ಥೆ ಇಂದು ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಮುಂದಿನ ಪ್ರಗತಿಗೆ ಶುಭ ಹಾರೈಸಿದರು.


ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ರಾಯ್ಕರ್ ಸಭೆಯ ವಿಷಯಪಟ್ಟಿ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ವೆರ್ಣೇಕರ್ ಹಾಗೂ ಸಾಲ ವಸೂಲಾತಿ ವ್ಯವಸ್ಥಾಪಕ ಅರುಣ ನಾಯ್ಕ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸಭೆಯ ಮುಂದಿಟ್ಟರು.
ಸಹಕಾರಿಯ ಅಧ್ಯಕ್ಷ ಜಾರ್ಜ ಫರ್ನಾಂಡಿಸ್ ಮಾತನಾಡಿ, ಮಲ್ಲಾಪುರದಲ್ಲಿ ಮೊದಲ ಶಾಖೆ ಆರಂಭಿಸುವ ಸಂದರ್ಭದಲ್ಲಿ ಕಾರವಾರದಲ್ಲಿ ಒಂದು ಶಾಖೆ ನಡೆಸುವ ಉದ್ದೇಶ ಹೊಂದಿದ್ದ ಸಂಸ್ಥೆ ಇಂದು ಒಟ್ಟು 111 ಶಾಖೆಗಳನ್ನು ಹೊಂದಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಸ್ಥೆಯು ಪ್ರಮುಖ ಸಹಕಾರಿ ಸಂಸ್ಥೆಯಾಗಿ ಬೆಳೆದಿರುವುದಕ್ಕೆ ಸದಸ್ಯರ ಕೊಡುಗೆ ಪ್ರಮುಖವಾಗಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಕಳೆದ 2025-26 ಸಾಲಿನಲ್ಲಿ ಸಂಸ್ಥೆಯ ಠೇವಣಿ ಸಂಗ್ರಹಣೆ 1605 ಕೋಟಿಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಠೇವಣಿಯಲ್ಲಿ 134 ಕೋಟಿ ರೂ. ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ 1316 ಕೋಟಿ ರೂ. ಸಾಲ ನೀಡಲಾಗಿದೆ. ಸಂಸ್ಥೆಯ ಶೇರು ಬಂಡವಾಳವು 53.74 ಕೋಟಿಯಾಗಿದ್ದು, 3,22,369 ಶೇರು ಸದಸ್ಯರಿಗೆ ಶೇ.8 ರಷ್ಟು ಲಾಭಾಂಶ ನೀಡಲಾಗುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 9.11ರೂ. ಕೋಟಿ ಲಾಭ ಗಳಿಸಿದೆ. ಕೋವಿಡ್ ಅವಧಿಯಿಂದ ಸಾಲ ವಸೂಲಾತಿಯಲ್ಲಿ ಕೆಲವು ಅಡಚಣೆಗಳು ಎದುರಾಗಿದ್ದರೂ, ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಸಹಕಾರಿಯಲ್ಲಿ ಸಾಲಗಾರರಿಗೆ ಮರಣೋತ್ತರ ಋಣ ಪರಿಹಾರ ನಿಧಿ ಯೋಜನೆ ಜಾರಿಯಲ್ಲಿದ್ದು, ಇದುವರೆಗೆ 16 ಸಾಲಗಾರರ ಪ್ರಕರಣಗಳಲ್ಲಿ ಒಟ್ಟು 16.36 ಲಕ್ಷ ಮೊತ್ತದ ಕ್ಲೈಂ ಪಾವತಿಸಲಾಗಿದೆ. ಸಂಸ್ಥೆಯಲ್ಲಿ ಪ್ರಸ್ತುತ 1,308 ಸಿಬ್ಬಂದಿಗಳು ಹಾಗೂ 312 ಪಿಗ್ಮಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳಿಗಾಗಿ ಗ್ರುಪ್ ಇನ್ಶುರೆನ್ಸ್ ಯೋಜನೆಯನ್ನೂ ಜಾರಿಗೊಳಿಸಲಾಗಿದ್ದು, ಇದುವರೆಗೆ 18 ಕ್ಲೈಂ 10.62 ಲಕ್ಷದ ಪ್ರಯೋಜನ ದೊರೆತಿದೆ.
ಸದಸ್ಯರಿಗೆ ಉತ್ತಮ ಸೇವೆ ಹಾಗೂ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಂಸ್ಥೆಯ 111 ಶಾಖೆಗಳಲ್ಲಿ 95 ಶಾಖೆಗಳು ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆಯ ನಿಯಮಗಳು ಹಾಗೂ ಅರ್ಹತೆಗೆ ಅನುಗುಣವಾಗಿ ವಿವಿಧ ವಿಧದ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸದಸ್ಯರು ಅವಶ್ಯಕತೆಗೆ ತಕ್ಕಂತೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಸೂಚಿಸಿದರು.
ಸಹಕಾರಿಯ ನಿರ್ದೇಶಕರಲ್ಲೊಬ್ಬರಾದ ಜುಜೆ ಫರ್ನಾಂಡಿಸ್ ಮಾತನಾಡಿ ಸಂಸ್ಥೆಯ ಬೆಳವಣಿಗೆಗೆ ಆಡಳಿತ ಮಂಡಳಿಯ ದೂರದೃಷ್ಟಿಯ ನಿರ್ಧಾರಗಳು, ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಹಾಗೂ ಸದಸ್ಯರ ನಿರಂತರ ಸಹಕಾರ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರು ಮತ್ತು ಗ್ರಾಹಕರ ಹಿತವನ್ನು ಕೇಂದ್ರವಾಗಿಟ್ಟುಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ನೀಡುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದರು.
ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕಿ ಕು.ಡೆಮಿ ಫರ್ನಾಂಡಿಸ್ ಸ್ವಾಗತಿಸಿದರು. ಪ್ರಧಾನ ಕಚೇರಿಯ ಠೇವಣಿ ವಿಭಾಗದ ಅಧಿಕಾರಿ ವಿನಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ವಿಭಾಗದ ಸಿಬ್ಬಂದಿ ಉಷಾ ಮುದಗೇಕರ್ ವಂದಿಸಿದರು. ಸಭೆಯಲ್ಲಿ ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರುಗಳು, ಪ್ರಧಾನ ವ್ಯವಸ್ಥಾಪಕರು, ಪ್ರಧಾನ ಕಚೇರಿಯ ಹಿರಿಯ ಮಾರ್ಗದರ್ಶಕರು, ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250