ಕಾರವಾರ:ಇಲ್ಲಿನ ಕಾರವಾರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಕಾರ್ಯವ್ಯಾಪ್ತಿಗೆ ಒಳಪಡುವ ವಿವಿಧ ಒಟ್ಟು 13 ಸಹಕಾರ ಸಂಘಗಳು ತಮ್ಮ ನೋಂದಾಯಿತ ವಿಳಾಸಗಳಲ್ಲಿ ಯಾವುದೇ ಕಾರ್ಯಾಚರಣೆ ನಡೆಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳ ಬಗ್ಗೆಯೂ ಇಲಾಖೆಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿರುವುದು ಗಂಭೀರ ವಿಷಯವಾಗಿದೆ.
ಕಾರವಾರದ ಕೆನರಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಶ್ರೀ ವಿಜಯಲಕ್ಷ್ಮೀ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಸುವರ್ಣಕಾರರ ಕೈಗಾರಿಕಾ ಸಹಕಾರ ಸಂಘ ನಿಯಮಿತ, ಕಾರವಾರ ಮಹಿಳಾ ಔದ್ಯೋಗಿಕ ಸಹಕಾರಿ ಸಂಘ ನಿಯಮಿತ, ದೇವಭಾಗ-ಕಣಸಗಿರಿ ಮೀನುಗಾರರ ಮಹಿಳಾ ಸಹಕಾರ ಸಂಘ ನಿಯಮಿತ, ನವಸಾಕ್ಷರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ, ಕೆರವಡಿಯ ಶ್ರೀ ಸಾತೇರಿ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ ನಿಯಮಿತ, ಚಿತ್ತಾಕುಲಾದ ಬಿಣಗಾ ಮೀನುಗಾರರ ಸಹಕಾರ ಸಂಘ ನಿಯಮಿತ, ಹಾಗೂ ಕಾರವಾರದ ಗೌರ್ನಮೆಂಟ್ ನೌಕರರ ಶ್ರೀ ಸಜ್ಜೆಶ್ವರ ಹೌಸಿಂಗ್ ಕೋ ಆಪ್ ಸೊಸೈಟಿ ನಿಯಮಿತ ಈ ಪಟ್ಟಿಯಲ್ಲಿ ಸೇರಿವೆ.
ಜೊತೆಗೆ, ಜೋಯಿಡಾ ತಾಲೂಕಿನ ಮಾವಳಿಂಗ ಗಂಗಾ ಕಲ್ಯಾಣ ಯೋಜನಾ ಫಲಾನುಭವಿಗಳ ಸಹಕಾರ ಸಂಘ ನಿಯಮಿತ ಮತ್ತು ಆನ್ಮಿ ಕುಣಬಿ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ, ಹಳಿಯಾಳ ತಾಲೂಕಿನ ಸಾಂಬ್ರಾಣಿ ಅರಣ್ಯ ನಿವಾಸಿಗಳ ಅರಣ್ಯ ಉತ್ಪತ್ತಿ ಶೇಖರಣೆ ಗುತ್ತಿಗೆ ಮಾರಾಟ ಸಹಕಾರ ಸಂಘ ನಿಯಮಿತ ಹಾಗೂ ದಾಂಡೇಲಿಯ ಬಂಗೂರನಗರದ ಗೋಪಾಲ ಡೇರಿ ಆಂಡ್ ಮಲ್ಟಿಪರ್ಪಸ್ ಕೋ ಆಪ್ ಸೊಸೈಟಿ ನಿಯಮಿತಗಳು ಸಹ ದೀರ್ಘಕಾಲದಿಂದ ನಿಷ್ಕ್ರಿಯಗೊಂಡಿವೆ.
ಲೆಕ್ಕಪತ್ರಗಳಿಲ್ಲ, ಬಾಕಿ ಮಾಹಿತಿಯೂ ಮರೀಚಿಕೆ: ಈ ಮೇಲ್ಕಂಡ ಸಂಘಗಳ ವ್ಯವಹಾರಗಳ ಲೆಕ್ಕಪರಿಶೋಧನೆ (Audit) ಕಳೆದ ಹಲವು ವರ್ಷಗಳಿಂದ ನಡೆದೇ ಇಲ್ಲ. ಅಲ್ಲದೆ, ಈ ಸಂಘಗಳಿಗೆ ಯಾರಿಂದ ಹಣ ಬರಬೇಕಿದೆ ಅಥವಾ ಇವರು ಯಾರಿಗೆ ಹಣ ಕೊಡಬೇಕಿದೆ ಎಂಬ ಯಾವುದೇ ಅಧಿಕೃತ ಮಾಹಿತಿ ಕೂಡ ಇಲಾಖೆಯ ಬಳಿ ಇಲ್ಲ.
ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಗಡುವು: ಈ ಸಹಕಾರ ಸಂಘಗಳೊಂದಿಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ, ಕೊಡಬೇಕಾದ ಅಥವಾ ಬರಬೇಕಾದ ಬಾಕಿ ಇದ್ದರೆ, ಸಂಬಂಧಪಟ್ಟ ವ್ಯಕ್ತಿಗಳು ಸೂಕ್ತ ದಾಖಲೆಗಳೊಂದಿಗೆ ಈ ಪ್ರಕಟಣೆ ಹೊರಬಂದ 7 ದಿನಗಳ ಒಳಗೆ ಕಾರವಾರದ ಹಬ್ಬುವವಾಡಾದ ಜಿ.ಕೆ. ರಾಮ್ ಕಟ್ಟಡದಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಒಂದು ವೇಳೆ ನಿರ್ದಿಷ್ಟಾವಧಿಯೊಳಗೆ ಯಾರು ಯಾವ ಆಕ್ಷೇಪಣೆ ಸಲ್ಲಿಸದಿದ್ದರೆ, ಸಂಘಗಳೊಂದಿಗೆ ಯಾರದ್ದೂ ಯಾವುದೇ ವ್ಯವಹಾರವಿಲ್ಲವೆಂದು ಭಾವಿಸಿ ನೋಂದಣಿ ರದ್ದತಿಗೆ ಅಧಿಕೃತ ಕ್ರಮಕೈಗೊಳ್ಳಲಾಗುವುದು. ತಡವಾಗಿ ಬರುವ ಯಾವುದೇ ಅರ್ಜಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಸಮಾಪನಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
13 ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಎಚ್ಚರಿಕೆ!
