ಶಿರಸಿ: ಪ್ರಾಂಶುಪಾಲೆ ಕಾಲೇಜಿಗೆ ಮರಳುತ್ತಿದ್ದಂತೆ ವಿದ್ಯಾರ್ಥಿಗಳು ತರಗತಿಗಳನ್ನೇ ಬಹಿಷ್ಕರಿಸಿ ಮನೆಗೆ ತೆರಳಿದ ಘಟನೆ ಶಿರಸಿ ತಾಲೂಕಿನ ಬಿಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ. ಸುಮಾರು 15 ದಿನಗಳ ಹಿಂದೆ ನಡೆದಿದ್ದ ಪ್ರತಿಭಟನೆಯ ಬೆನ್ನಲ್ಲೇ ಮತ್ತೆ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿರುವುದು ಕಾಲೇಜಿನಲ್ಲಿನ ಸಂಘರ್ಷ ಇನ್ನೂ ಬಗೆಹರಿದಿಲ್ಲ ಎಂಬುದನ್ನು ತೋರಿಸಿದೆ.
ರಜೆಯಲ್ಲಿದ್ದ ಪ್ರಾಂಶುಪಾಲೆ ಶುಕ್ರವಾರ ಕಾಲೇಜಿಗೆ ಹಾಜರಾದ ಸಂದರ್ಭ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳದೆ ಏಕಾಏಕಿ ಕ್ಲಾಸ್ ಬಾಯ್ಕಾಟ್ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಟು ಮನೆಗೆ ತೆರಳಿದ್ದು, ಕೆಲಕಾಲ ಕಾಲೇಜು ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪ್ರಾಂಶುಪಾಲೆ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಹಾಗೂ ವಿದ್ಯಾರ್ಥಿಗಳ ಎದುರೇ ಪೋಷಕರು ಮತ್ತು ಉಪನ್ಯಾಸಕರೊಂದಿಗೆ ಅಗೌರವದಿಂದ ವರ್ತಿಸುತ್ತಾರೆ ಎಂಬ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಇದೇ ಕಾರಣಕ್ಕೆ ಹಿಂದೆಯೂ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿ, ಪ್ರಾಂಶುಪಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಾಂಶುಪಾಲೆಯನ್ನು ರಜೆಯ ಮೇಲೆ ಕಳುಹಿಸಿದ್ದರು ಎನ್ನಲಾಗಿದೆ. ಇದೀಗ ಅವರು ಮತ್ತೆ ಕರ್ತವ್ಯಕ್ಕೆ ಮರಳಿರುವುದೇ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಂಶುಪಾಲೆಯ ವರ್ಗಾವಣೆಯಾಗುವವರೆಗೆ ಕಾಲೇಜಿಗೆ ಹಾಜರಾಗುವುದಿಲ್ಲ ಎಂಬ ನಿಲುವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಎದುರಾಗುತ್ತಿರುವ ಈ ಸಂಘರ್ಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕವೂ ವ್ಯಕ್ತವಾಗಿದ್ದು, ಸಮಸ್ಯೆಗೆ ಶಿಕ್ಷಣ ಇಲಾಖೆ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
