ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಪಶ್ಚಿಮ ಪದವೀಧರರ ಕ್ಷೇತ್ರ: ಸಂಕನೂರಗೆ ಜಯ!

Pakka News Web • 28 ಆಕ್ಟೋ 2026,

ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಸಂಕನೂರ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ತಿಳಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 27ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಅಕ್ಟೋಬರ್ 28ರ ಮಧ್ಯರಾತ್ರಿ 2 ಗಂಟೆಗೆ ಮುಕ್ತಾಯಗೊಂಡಿತು.

ಅಕ್ಟೋಬರ್ 23ರಂದು ನಡೆದ ಚುನಾವಣೆಯಲ್ಲಿ ಒಟ್ಟು 97,400 ಮತದಾರರ ಪೈಕಿ 73,658 ಮಂದಿ ಮತ ಚಲಾಯಿಸಿದ್ದು, ಶೇ.75.62ರಷ್ಟು ಮತದಾನವಾಗಿತ್ತು. ಮತದಾನ ಮಾಡಿದವರಲ್ಲಿ 45,110 ಪುರುಷರು ಹಾಗೂ 28,548 ಮಹಿಳೆಯರು ಸೇರಿದ್ದರು.

ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಎಸ್.ವಿ. ಸಂಕನೂರ 33,711 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ 24,388 ಮತಗಳನ್ನು ಪಡೆದಿದ್ದು, ಸಂಕನೂರ ಅವರು 9,323 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳ ಪೈಕಿ ಕಾಂತಕುಮಾರ ಆರ್. 4,055 ಮತಗಳನ್ನು ಪಡೆದರೆ, ಡಾ. ಜಿ.ಎಚ್. ಇಮ್ರಾಪುರ 338, ಉಮೇಶ ಕೃಷ್ಣಪ್ಪ ದೈವಜ್ಞ 228, ನಿಶಾಂತ ಶಂಕರ ಬಂಕಾಪುರ 143, ಕೃಷ್ಣಾ ಎಚ್. ಬಳೆಗಾರ 141, ಅಬ್ದುಲ್ ಮನ್ನಾನ 120, ಸಂತೋಷ ಮನೋಹರ ವೆರ್ಣಿಕರ 85, ಜೀಶಾನ್ ಅಹ್ಮದಖಾನ್ ಪಟ್ಹಾನ್ 62, ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ 55, ತಳವಾರ ಶಿವಕುಮಾರ 42, ಜಿಶಾನ್ ಡಿ. ಶಿರಸಂಗಿ 39 ಹಾಗೂ ಬಸವರಾಜ ಶಂಕರಪ್ಪ ಕೊಟಗಿ 39 ಮತಗಳನ್ನು ಪಡೆದಿದ್ದಾರೆ.

ಒಟ್ಟು 73,691 ಮತಗಳಲ್ಲಿ 63,446 ಮತಗಳು ಮಾನ್ಯವಾಗಿದ್ದು, 10,245 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250