ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ಗಣಪತಿ ಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕ್ಯಾಂಟರ್ ಲಾರಿ, ಟಿಟಿ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆನಗೋಡಿನ ವಿನಾಯಕ ಭಟ್ಟ ಅವರು ಕಾರಿನಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದತ್ತ ಬರುತ್ತಿದ್ದಾಗ ಇಡಗುಂದಿಯ ಗಣಪತಿ ಕಟ್ಟೆ ಬಳಿ ಎದುರಿನಿಂದ ಬಂದ ಕ್ಯಾಂಟರ್ ಲಾರಿ ಕಾರಿನ ಹಿಂಬದಿಯ ಬಾಗಿಲಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಕಾರಿನ ಹಿಂದೆ ಬರುತ್ತಿದ್ದ ಟಿಟಿ ವಾಹನಕ್ಕೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಟಿಟಿ ವಾಹನದಲ್ಲಿದ್ದ ಬಾಗಲಕೋಟೆಯ ನಾಗರಾಜ ಹೊರಗಿನಮಠ, ವಿನಾಯಕ ಖಮಿತ್ಕರ್, ಸುರೇಶ ಹೊಸಗೌಡರ್, ಸುರೇಶ ಬೆನಕಟ್ಟಿ, ರಮೇಶ ಕಂದಕುರ್, ವಿನಯ ಜಿಂಗಾಟೆ, ರಾಜಶೇಖರ ಚಳಕಿಮಠ, ನಿತಿನ್ ಜೈನ್, ರಮೇಶ ಜಾಧವ, ಸಂದೇಶ ಕರ್ನೆ, ಹಾಜಮಸ್ತಾನ ಬದಾಮಿ ಹಾಗೂ ಮೆಹಬೂಬ್ ಸಾಬ ಸುರಪುರ ಗಾಯಗೊಂಡಿದ್ದಾರೆ. ಕ್ಯಾಂಟರ್ ಲಾರಿಯಲ್ಲಿದ್ದ ಕಲಘಟಗಿಯ ಹನುಮಂತ ಶಂಕ್ರಪ್ಪನರ್ವ ಅವರಿಗೂ ಗಾಯಗಳಾಗಿವೆ.
ಅಪಘಾತದಿಂದಾಗಿ ಮೂರು ವಾಹನಗಳು ಹಾನಿಗೊಳಗಾಗಿವೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
