ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಕಾಮಗಾರಿ ನೆಪದಲ್ಲಿ ರಸ್ತೆ ಅಗೆತ: ದುರಸ್ತಿಯಿಲ್ಲದೆ ಪ್ರಯಾಣಿಕರಿಗೆ ಸಂಕಷ್ಟ

Pakka News Web • 25 ಸೆಪ್ಟೆಂ 2026,

ಕಾರವಾರ: ನಗರದ ಪ್ರಮುಖ ಸಂಪರ್ಕ ರಸ್ತೆಯೊಂದಾಗಿರುವ ಡಿಎಚ್‌ಓ ಕಚೇರಿಯಿಂದ ಕಾಜುಬಾಗ್ ಕ್ರಾಸ್‌ವರೆಗೆ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಒಳಚರಂಡಿ ಕಾಮಗಾರಿ ಪೂರ್ಣಗೊಂಡು ಹಲವು ದಿನಗಳಾದರೂ ರಸ್ತೆ ಸಮರ್ಪಕವಾಗಿ ದುರಸ್ತಿ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್, ಕೂಡಲೇ ಡಾಂಬರೀಕರಣ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಡಿಎಚ್‌ಓ ಕಚೇರಿಯಿಂದ ಕಾಜುಬಾಗ್ ಕ್ರಾಸ್‌ವರೆಗೆ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದ ಭಾಗಕ್ಕೆ ಮಣ್ಣು ಹಾಕಿ ಮುಚ್ಚಲಾಗಿದ್ದು, ನಂತರ ರಸ್ತೆಯನ್ನು ಸಮತಟ್ಟು ಮಾಡಿ ಡಾಂಬರೀಕರಣ ಮಾಡಬೇಕಾಗಿತ್ತು. ಆದರೆ ಇದುವರೆಗೆ ಡಾಂಬರೀಕರಣ ನಡೆಯದ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿನಿತ್ಯ ಪರದಾಡುವಂತಾಗಿದೆ.

ರಸ್ತೆಯ ಅವ್ಯವಸ್ಥೆಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕೆಲವರು ಗಾಯಗೊಂಡು ಗಂಭೀರ ಸ್ವರೂಪದ ತೊಂದರೆ ಅನುಭವಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಮಂಗಳೂರು, ಮಣಿಪಾಲ ಹಾಗೂ ಗೋವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸೂರಜ್ ಕುರುಮಕರ್ ಆರೋಪಿಸಿದ್ದಾರೆ.

ರಸ್ತೆ ದುರಸ್ತಿ ಕುರಿತು ಈ ಹಿಂದೆಯೇ ನಗರಸಭೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರೂ, ಕಾಮಗಾರಿ ಕೈಗೊಳ್ಳುವ ಭರವಸೆ ಮಾತ್ರ ನೀಡಲಾಗುತ್ತಿದೆ. ಆದರೆ, ರಸ್ತೆ ದುರಸ್ತಿ ಕಾರ್ಯ ಮಾತ್ರ ಆರಂಭವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕೈಗೊಳ್ಳಬೇಕು. ಒಂದು ವಾರದೊಳಗೆ ಕಾಮಗಾರಿ ಆರಂಭಿಸದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸೂರಜ್ ಕುರುಮಕರ್ ಎಚ್ಚರಿಕೆ ನೀಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250